ಬಿಜೆಪಿ ಯುವಮೋರ್ಚಾ ಬೈಕ್ ಜಾಥಾ ಕೈಬಿಡಲು ಸಚಿವ ಖಾದರ್ ಒತ್ತಾಯ
ಮಂಗಳೂರು: ಬಿಜೆಪಿ ಯುವ ಮೋರ್ಚಾ ರಾಜ್ಯ ಸಮಿತಿ ದಕ ಜಿಲ್ಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಯೋಜಿಸಿದ ಬೈಕ್ ಜಾಥಾದಿಂದ ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಆದ್ದರಿಂದ ಬೈಕ್ ಜಾಥಾವನ್ನು ಕೈಬಿಡಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕೆ ಪೊರೈಕೆ ಸಚಿವ ಯು.ಟಿಖಾದರ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ತವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಜಾಥಾ ನಡೆಸಲು ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಕೆಲಸಮಯದ ಹಿಂದ ನಡೆದ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ವಿವಿಧ ಜಿಲ್ಲೆಗಳಿಂದ ದಕ ಜಿಲ್ಲೆಗೆ ಬೈಕ್ ಜಾಥಾ ಆಗಮಿಸುವ ವೇಳೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ. ದುರ್ಘಟನೆಗಳು ನಡೆದ ಬಳಿಕ ಒಬ್ಬರಿಗೊಬ್ಬರು ದೂಷಣೆ ಮಾಡುವ ಪ್ರಸಂಗ ಎದುರಾಗುವ ಬದಲು ಆರಂಭದಲ್ಲಿಯೇ ಎಚ್ಚರಿಕೆ ವಹಿಸುವುದು ಉತ್ತಮ. ಏಕಕಾಲದಲ್ಲಿ ವಿಭಿನ್ನ ಕಡೆಗಳಿಂದ ಜಾಥಾ ಜಿಲ್ಲೆಗೆ ಆಗಮಿಸುವುದರಿಂದ ಪೋಲಿಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟ ಸಾಧ್ಯವಾಗಬಹುದು. ಜಿಲ್ಲಾ ತಾಲೂಕು ವ್ಯಾಪ್ತಿಯಲ್ಲಿ ನಡೆಸುವ ಜಾಥಾಕ್ಕೆ ಯಾವುದಕ್ಕೂ ಅಭ್ಯಂತರವಿಲ್ಲ ಆದರೆ ಬೇರೆ ಬೇರೆ ಜಿಲ್ಲೆಗಳಿಂದ ಬೈಕ್ ಜಾಥಾ ಜಿಲ್ಲೆಗೆ ಆಗಮಿಸುವುದು ಬೇಡ ಎನ್ನುವ ಆಗ್ರಹ ನನ್ನದು. ಜಿಲ್ಲೆಯ ಶಾಂತಿ ಸಹೋದರತೆ, ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಜಾಥಾವನ್ನು ಕೈಬಿಡಬೇಕು ಎಂದು ಅಗ್ರಹಿಸಿದರು.