ಬಿರುಕು ಬಿಟ್ಟ ಅರಾಟೆ ಹೊಸ ಸೇತುವೆ: ಸಾರ್ವಜನಿಕರಲ್ಲಿ ಆತಂಕ
ಕುಂದಾಪುರ: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಅರಾಟೆ ಸೇತುವೆ ಬಿರುಕು ಬಿಟ್ಟಿದ್ದು, ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಇಲ್ಲಿನ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆಯನ್ನು ದುರಸ್ಥಿಗೊಳಿಸಿ ಅಲ್ಲೇ ಪಕ್ಕದಲ್ಲೇ ಹೊಸದೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದು ಮೂರು ವರ್ಷಗಳ ಹಿಂದೆ ಹೊಸ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು ಕಳೆದೆರಡು ವರ್ಷಗಳಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಇಂದು ಹೊಸ ಸೇತುವೆಯ ಪಿಲ್ಲರ್ ಮೇಲಿನ ಜೋಡಣೆಯಲ್ಲಿ ಬಿರುಕು ಬಿಟ್ಟಿದ್ದು, ರಾಡ್ ಗಳೂ ಕೂಡ ತುಂಡಾಗಿವೆ. ಸದ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಹಳೆ ಸೇತುವೆಯ ಮೂಲಕ ಬಿಡಲಾಗುತ್ತಿದೆ.
ಅರಾಟೆ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಸೇತುವೆಯ ಆರಂಭದಲ್ಲಿ ಈ ಹಿಂದೆಯೂ ಕುಸಿತ ಉಂಟಾಗಿತ್ತು. ಆ ಬಳಿಕ ಗುತ್ತಿಗೆ ವಹಿಸಿಕೊಂಡ ಐಆರ್ ಬಿ ಕಂಪೆನಿ ಅದನ್ನು ದುರಸ್ತಿಗೊಳಿಸಿತ್ತು. ಇದೀಗ ಇನ್ನೊಂದು ಕಡೆಯಲ್ಲಿ ಸೇತುವೆ ಬಿರುಕು ಉಂಟಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ಕಂಪೆನಿಯ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದು, ಅರಾಟೆ ಸೇತುವೆ ಕಳಪೆ ಕಾಮಗಾರಿಯನ್ನು ತನಿಖೆ ನಡೆಸಿ ಗುತ್ತಿಗೆ ಕಂಪೆನಿಯ ವಿರುದ್ದ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಹುದೊಡ್ಡ ಸೇತುವೆ: ಸರಿಸುಮಾರು ಒಂದು ಕಿ.ಮೀ ದೂರವಿರುವ ಈ ಸೇತುವೆ ಕರಾವಳಿಯಲ್ಲೇ ಅತೀ ದೊಡ್ಡ ಸೇತುವೆ ಎನಿಸಿಕೊಂಡಿದೆ. ಕಾರವಾರ ಸೇತುವೆ ಬಿಟ್ಟರೆ ಎರಡನೇ ಅತೀ ದೊಡ್ಡದ ಸೇತುವೆ ಇದಾಗಿದೆ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಹಾಗೂ ಹೈವೇ ಪ್ಯಾಟ್ರೋಲ್ ಭೇಟಿ ನೀಡಿದ್ದಾರೆ.