ಬಿರುವೆರ್ ಕುಡ್ಲ ಸಂಘಟನೆ ವತಿಯಿಂದ ಸಾವಿರದೈನೂರು ಕುಟುಂಬಗಳಿಗೆ ಅಕ್ಕಿ ವಿತರಣೆ
ಮಂಗಳೂರು: ಕೋಡಿಕಲ್ ಬಿರುವೆರ್ ಕುಡ್ಲ ಕೋರ್ಡೆಲ್ ಫ್ರೆಂಡ್ಸ್ ಘಟಕ 1 ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಕೋಡಿಕಲ್ ಶಾಲೆಯಲ್ಲಿ ಸುಮಾರು 1500 ಕುಟುಂಬಗಳಿಗೆ 80 ಕ್ವಿಂಟಾಲ್ ಅಕ್ಕಿಯನ್ನು ವಿತರಣಾ ಸಮಾರಂಭ ಆದಿತ್ಯವಾರ ಜರಗಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ನಗರ ಉತ್ತರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೇಶವ ಸನಿಲ್ ಅವರು ಬಿರುವೆರ್ ಕುಡ್ಲ ಸಂಘಟನೆಯು ಎಲ್ಲಾ ಜಾತಿ, ಮತ, ಧರ್ಮದ ಜನರನ್ನು ಒಟ್ಟುಗೂಡಿಸಿ ಸಮಾನ ನ್ಯಾಯಪರವಾಗಿ ಕೆಲಸ ಮಾಡಿ ಎಲ್ಲರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಬಡವರ್ಗದ ಚಿಕಿತ್ಸೆಗಾಗಿ ಧನ ಸಹಾಯ, ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಹಸ್ತ, ನ್ಯಾಯಪರ ವಿಚಾರಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಾ ಇದೀಗ ಒಂದೂವರೆ ಸಾವಿರ ಬಡ ವರ್ಗಕ್ಕೆ ಅಕ್ಕಿ ಭಾಗ್ಯವನ್ನು ಈ ಘಟಕ ಕೋಡಿಕಲ್‍ನಲ್ಲಿ ನೀಡುವ ಮೂಲಕ ಮಾನವೀಯ ಕಾಳಜಿಯನ್ನು ಎತ್ತಿ ತೋರಿಸಿದೆ ಎಂದು ಶ್ಲಾಘಿಸಿದರು.
ಕಾರ್ಪೋರೇಟರ್ ಹರೀಶ್ ಶೆಟ್ಟಿ ಮಾತನಾಡಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅರ್ಹರಿಗೆ ಅನ್ನಭಾಗ್ಯ ಯೋಜನೆಯ ಮಾದರಿಯಲ್ಲಿ ಅಕ್ಕಿ ಹಂಚುವ ಮೂಲಕ ಶ್ರೇಷ್ಟ ಕಾರ್ಯ ಮಾಡುತ್ತಿದೆ. ಇವರ ಈ ಸಾಧನೆ ಬೇರೆ ಸಂಘಟನೆಗಳಿಗೆ ಮಾದರಿಯಾಗಿದೆ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಹಾಗೂ ಕೋಡಿಕಲ್ ಘಟಕದ ಬಾಲಕೃಷ್ಣ ಕುಂದರ್ ಅತ್ಯುತ್ತಮ ಯೋಜನೆ ಹಮ್ಮಿಕೊಳ್ಳುವ ಮೂಲಕ ಸಂಘಟನೆ ಮನೆ ಮಾತಾಗುವಂತೆ ಮಾಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಕೋರ್ಡೆಲ್ ಫ್ರೆಂಡ್ಸ್ ಬಿರುವೆರ್ ಕುಡ್ಲ ಅಧ್ಯಕ್ಷ ಬಾಲಕೃಷ್ಣ ಕುಂದರ್, ಸದಸ್ಯರಾದ ರಾಕ್ಷನ್, ಬಿ. ಗೋಪಾಲ ಕೋಟ್ಯಾನ್, ವಸಂತ ಪೂಜಾರಿ, ಸತೀಶ್ ಪೂಜಾರಿ, ಚಂದ್ರಹಾಸ ಪೂಜಾರಿ, ಪ್ರಕಾಶ ಕುಂದರ್, ಮಹಾಬಲ ಕುಕ್ಯಾನ್, ಕೃಷ್ಣ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಕುಂದರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.