ಬಿ.ಸಿ. ರೋಡು ಅಭಿವೃದ್ಧಿಗೆ ಸರ್ವ ಸಹಕಾರ : ಕಂದಾಯ ಸಚಿವ ಅಶೋಕ್
ಮಂಗಳೂರು: ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ. ರೋಡು ಪೇಟೆಯ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕೆ ತೊಡಕಾಗಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಪೇಟೆಯ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಅವರು ಸೋಮವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಬಿ.ಸಿ. ರೋಡು ಅಭಿವೃದ್ಧಿ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. ಮುಖ್ಯವಾಗಿ ಬಿ.ಸಿ. ರೋಡ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಸುವ್ಯಸ್ಥಿತ ರೀತಿಯಲ್ಲಿ ಇಲ್ಲದೇ ಇರುವುದು ಪ್ರಮುಖ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ಹಾಗೂ ಚರಂಡಿ, ಫುಟ್ಪಾತ್ ನಿರ್ಮಿಸಲು ಅಗತ್ಯ ಭೂಮಿಯನ್ನು ರಾಜ್ಯ ಸರಕಾರ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಬಿ.ಸಿ. ರೋಡು ಸೌಂದರ್ಯೀಕರಣಕ್ಕೆ ಸರಕಾರದೊಂದಿಗೆ ಬೃಹತ್ ಕೈಗಾರಿಕೆಗಳು, ಉದ್ಯಮಿಗಳು ಕೈಜೋಡಿಸಿರುವುದು ಶ್ಲಾಘನೀಯವಾಗಿದೆ. ಇದರಿಗೆ ರಾಜ್ಯ ಸರಕಾರ ಎಲ್ಲ ನೆರವು ನೀಡಲಿದೆ. ಕಾಲಮಿತಿಯಲ್ಲಿ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು ಎಂದು ಸಚಿವರು ತಿಳಿಸಿದರು.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಮಾತನಾಡಿ, ಬಿ.ಸಿ. ರೋಡಿನಲ್ಲಿ ಹೆದ್ದಾರಿ ಸೇರಿದಂತೆ ಕೇಂದ್ರ ಸರಕಾರದಿಂದ ನಡೆಯಬೇಕಾದ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುವುದು. ಸಂಸದರ ನಿಧಿಯಿಂದ ಬಸ್ಬೇ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಸುಮಾರು 21.50 ಕೋಟಿ ರೂ. ವೆಚ್ಚದಲ್ಲಿ ಬಿ.ಸಿ. ರೋಡಿನಲ್ಲಿ ಅಭಿವೃದ್ಧಿ, ಪಾದಚಾರಿಗಳಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯ ಹಾಗೂ ಸೌಂದರ್ಯೀಕರಣ ಕಾಮಗಾರಿ ನಡೆಯಲಿದೆ. ಕೇಂದ್ರ-ರಾಜ್ಯ ಸರಕಾರದೊಂದಿಗೆ ಜಿಲ್ಲೆಯ ಕೈಗಾರಿಕೆಗಳು, ಉದ್ಯಮಿಗಳು ಇದರೊಂದಿಗೆ ಕೈಜೋಡಿಸಿದ್ದಾರೆ. ಎಂಆರ್ಪಿಎಲ್, ಎನ್ಎಂಪಿಟಿ, ಎಚ್ಪಿಸಿಎಲ್, ಐಓಸಿಎಲ್ ಮತ್ತಿತರ ಸಂಸ್ಥೆಗಳು ಸಿಎಸ್ಆರ್ ಅಡಿ ನೆರವು ನೀಡಲು ಮುಂದೆ ಬಂದಿವೆ ಎಂದರು.
ಹೆದ್ದಾರಿ ಅಗಲೀಕರಣ, ಸರ್ವೀಸ್ ರೋಡು, ಕೆಎಸ್ಆರ್ಟಿಸಿ ಬಸ್ಸ್ಟಾಂಡ್ ಸಮೀಪ ವೃತ್ತ ನಿರ್ಮಾಣ, ಫ್ಲೈಓವರ್ ಅಡಿ ಸುಂದರೀಕರಣ, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್, ಚರಂಡಿ ನಿರ್ಮಾಣ, ಸಿಸಿಟಿವಿ ಅಳವಡಿಕೆ, ಕೈಕುಂಜೆ ರಸ್ತೆ ಅಭಿವೃದ್ಧಿ, ಪಾದಚಾರಿಗಳಿಗೆ ಫುಟ್ಪಾತ್ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಡಾ. ಭರತ್ ಶೆಟ್ಟಿ, ಜಿ.ಪಂ. ಸಿಇಓ ಡಾ. ಸೆಲ್ವಮಣಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಎನ್ಎಚ್ಎಐ ಯೋಜನಾ ನಿರ್ದೇಶಕ ಶಿಶುಮೋಹನ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.