ಬೀಡಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಸಭೆ ಕರೆಯಲು ಆಗ್ರಹ
ಬೀಡಿ ಕಾರ್ಮಿಕರಿಗೆ ಸರ್ವಾನುಮತದಲ್ಲಿ ತೀರ್ಮಾನವಾದಂತೆ ಕನಿಷ್ಟ ವೇತನ ಪಾವತಿ ಕಾಯ್ದೆಯ ಸೆಕ್ಷನ್ 5(1) (ಎ) ಕಮಿಟಿಯ ತೀರ್ಮಾನದಂತೆ ಸಾವಿರ ಬೀಡಿಗೆ ರೂ.210/-ನ್ನು ನೀಡಲು ಅಧಿಸೂಚನೆ ಹೊರಡಿಸಿದ್ದರೂ ಇಂದಿನವರೆಗೆ ಬೀಡಿ ಮಾಲಕರು ಈ ಮೊತ್ತವನ್ನು ಕಾರ್ಮಿಕರಿಗೆ ಪಾವತಿಸಿರುವುದಿಲ್ಲ. ಹಾಗೆನೇ 2015ರಲ್ಲಿ ನೀಡಬೇಕಾದಂತಹ ತುಟ್ಟಿಭತ್ತೆ ರೂ.12.75 ಪೈಸೆಯನ್ನು ಕೂಡ ಕಾರ್ಮಿಕರಿಗೆ ಪಾವತಿಸಿರುವುದಿಲ್ಲ. ವಿಪರೀತ ಬೆಲೆ ಏರಿಕೆ ಆಗಿರುವಂತಹ ಈ ಸಂದರ್ಭದಲ್ಲಿ ಬೀಡಿ ಕಾರ್ಮಿಕರು ತಮ್ಮ ಕುಟುಂಬ ಜೀವನ ನಿರ್ವಹಿಸುವರೇ ಅವರಿಗೆ ನ್ಯಾಯೋಚಿತವಾಗಿ ನೀಡಬೇಕಾಗಿದ್ದ ಈ ಬಾಕಿ ಮೊತ್ತವನ್ನು ಜ್ಯಾರಿಗೊಳಿಸಲು 2018 ಜೂನ್ 1 ರಿಂದ ಹಲವಾರು ನಮೂನೆಯ ಪ್ರತಿಭಟನೆ ಹೋರಾಟಗಳನ್ನು ನಡೆಸಿದ್ದರೂ ಫಲಕಾರಿಯಾಗಿಲ್ಲ. ಇಂದು ಅಖಿಲ ಭಾರತ ಬೀಡಿ ಕಾರ್ಮಿಕರ ಬೇಡಿಕೆಯ ದಿನಾಚರಣೆಯ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿಯ ಮುಂದುಗಡೆ ನೂರಾರು ಬೀಡಿ ಕಾರ್ಮಿಕ ಬಂಧುಗಳು ಪ್ರತಿಭಟನಾ ಪ್ರದರ್ಶನ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳು ನ್ಯಾಯೋಚಿತವಾಗಿ ಬೀಡಿ ಮಾಲಕರು ನೀಡಬೇಕಾದ ಸವಲತ್ತು ನೀಡುವರೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬೀಡಿ ಮಾಲಕರು ಹಾಗೂ ಕಾರ್ಮಿಕ ಸಂಘಟನೆಗಳ ನಾಯಕರ ಜಂಟಿ ಸಮಿತಿಯನ್ನು ಕರೆಯಬೇಕೆಂದು ಮನವಿ ನೀಡಿ ಒತ್ತಯಿಸಲಾಯಿತು.
ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಕರ್ನಾಟಕ ರಾಜ್ಯ ಬೀಡಿ ವರ್ಕರ್ಸ್ ಫೆಡರೇಶನ್‍ನ ರಾಜ್ಯಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ಬೀಡಿ ಕಾರ್ಮಿಕರ ಕಾನೂನು ಪ್ರಕಾರ ಏರಿಕೆ ಮಾಡಬೇಕಾದಂತಹ ಕನಿಷ್ಟ ವೇತನವನ್ನು ರಾಜ್ಯ ಸರಕಾರವು ಸರ್ವಾನುಮತವಾಗಿ ತೀರ್ಮಾನ ಮಾಡಿದ್ದು ಬೀಡಿ ಮಾಲಕರು ತಮ್ಮ ಹಟಮಾರಿತನದಿಂದಾಗಿ ಜ್ಯಾರಿ ಮಾಡದಿರುವುದರಿಂದ ಬೀಡಿ ಕಾರ್ಮಿಕರಿಗೆ ಅನ್ಯಾಯವೆಸಗಿದಂತಾಗಿದೆ. 2015ರ ತುಟ್ಟಿಭತ್ತೆ ಕೂಡಾ ಬಾಕಿ ಉಳಿಸಿಕೊಂಡಿದ್ದಾರೆ. ಕೇಂದ್ರ ಸರಕಾರ ಕೂಡಾ ಬೀಡಿ ಕಾರ್ಮಿಕರನ್ನು ಬೀದಿಪಾಲು ಮಾಡುವಂತಹ ಕೋಪ್ಟಾ ಕಾಯಿದೆಯನ್ನು ಕಠಿಣಗೊಳಿಸಿದೆ. ಅಂಗಡಿ ಮುಗ್ಗಟ್ಟುಗಳಲ್ಲಿ ಬೀಡಿ ಮಾರಾಟ ಮಾಡುವುದಕ್ಕೆ ತಡೆ ಒಡ್ಡಲಾಗುತ್ತದೆ. ಇದರಿಂದಾಗಿ ಬೀಡಿ ಕಾರ್ಮಿಕರಿಗೆ ಕೆಲಸದ ಅಭದ್ರತೆ ಸೃಷ್ಟಿಯಾಗಿದೆ. ಮಾತ್ರವಲ್ಲದೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ನಮೂನೆಯ ಕನಿಷ್ಟ ಕೂಲಿ ಇದ್ದರೂ
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಕಡಿಮೆ ಕೂಲಿ ನಿಗದಿಯಾಗಿದೆ. ಅದನ್ನೂ ನೀಡಲು ಬೀಡಿ ಮಾಲಕರು ನಿರಾಕಾರ ಮಾಡುತ್ತಿರುವುದು ಆಕ್ಷೇಪಾರ್ಹವಾಗಿದೆ ಎಂದು ಅವರು ಹೇಳಿದರು.
ಫೆಡರೇಶನ್‍ನ ಜಿಲ್ಲಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ನೋಟಿನ ಮಾನ್ಯತೆ ರದ್ದು ಮಾಡಿ, ಜಿಎಸ್‍ಟಿ ಹೇರಿಕೆ ಮಾಡಿರುವುದರಿಂದಾಗಿ ವಿಪರೀತ ಬೆಲೆ ಏರಿಕೆಯಾಗಿದೆ. ಕೋಟ್ಪಾ ಕಾಯಿದೆಯನ್ನು ಯಾವುದೇ ಪರ್ಯಾಯ ಪರಿಹಾರ ನೀಡದೆ ಜ್ಯಾರಿ ಮಾಡಿರುವುದರಿಂದ ಬೀಡಿ ಕಾರ್ಮಿಕರು ಕಂಗಾಲಾಗಿದ್ದಾರೆ. ಆನ್‍ಲೈನ್ ಡಿಜಿಟಲ್ ಮತ್ತು ಆಧಾರªನ್ನು ಕಡ್ಡಾಯಗೊಳಿಸಿರುವುದರಿಂದಾಗಿ ಬೀಡಿ ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಹಾಗೂ ಪಿಂಚಣಿಗೆ ಅಡೆತಡೆ ಬಂದಿದೆ. ಬೀಡಿ ಕಾರ್ಮಿಕರು ವಿನಾಕಾರಣ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯ ಸವಲತ್ತುಗಳಿಗೆ ಆನ್‍ಲೈನ್ ಪದ್ಧತಿ ಅಳವಡಿಸಿರುವುದರಿಂದಾಗಿ ಅವರುಗಳಿಗೆ ಯಾವುದೇ ಸೌಲಭ್ಯ ಲಭ್ಯವಾಗುತ್ತಿಲ್ಲ. ಈ ಎಲ್ಲಾ ನೀತಿಗೆ ನರೇಂದ್ರ ಮೋದಿ ಸರಕಾರದ ವಿಫಲತೆಯೇ ಕಾರಣವಾಗಿದೆ ಎಂದು ಅವರು ಆಕ್ಷೇಪಿಸಿದರು. ಬೀಡಿ ಕಾರ್ಮಿಕರ ಮುಂದಾಳು ಬಾಬು ದೇವಾಡಿಗರು ಮಾಲಕರು ಕನಿಷ್ಟ ಕೂಲಿ ಹಾಗೂ ತುಟ್ಟಿಭತ್ತೆ ವಿತರಿಸದೇ ಇದ್ದರೆ ಕಾನೂನುಭಂಗ ಚಳುವಳಿ ನಡೆಸಲು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಜಿಲ್ಲಾ ಫೆಡರೇಶನ್‍ನ ಉಪಾಧ್ಯಕ್ಷರಾದ ಯು.ಬಿ.ಲೋಕಯ್ಯ, ಜಯಂತ ನಾಯ್ಕ್, ಸುಮತಿ ಅಡ್ಯಾರ್, ಜಯಲಕ್ಷ್ಮಿ, ಪುಷ್ಪ, ಮುಂತಾದವರು ಇದ್ದರು. ಪ್ರಾರಂಭದಲ್ಲಿ ಜಯಂತಿ ಬಿ.ಶೆಟ್ಟಿಯವರು ಸ್ವಾಗತಿಸಿದರು. ಕೊನೆಯಲ್ಲಿ ಭಾರತಿ ಬೋಳಾರ್‍ರವರು ಧನ್ಯವಾದ ನೀಡಿದರು.