ಬೆಂಗರೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಖಂಡಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ
ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೈಗೊಂಡಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ಇಂದು ಸರಕಾರಿ ಪ್ರಾಥಮಿಕ ಶಾಲೆ ಬೆಂಗರೆ ಇಲ್ಲಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ತಮ್ಮ ಪೋಷಕರು ಹಾಗೂ SFI, DYFI ಸಂಘಟನೆ ಜೊತೆ ಸೇರಿ ಪ್ರತಿಭಟನೆಯನ್ನು ನಡೆಸಿದರು.
ಬೆಂಗರೆ ಪ್ರದೇಶದಲ್ಲಿ ವಾಸಿಸುವ ಜನರು ಬಡವರಾಗಿದ್ದು ಮಾತ್ರವಲ್ಲ ಸ್ವಂತ ಮನೆಯ ಆಸರೆ ಇಲ್ಲದೆ, ಹಕ್ಕುಪತ್ರಗಳಿಲ್ಲದೆ ಬದುಕುವಂತಹ ಜನರ ಮಕ್ಕಳು ಶಿಕ್ಷಣ ಪಡೆಯಲು ಇರುವಂತಹ ಏಕೈಕ ಶಾಲೆ ಇದಾಗಿದೆ. ಸುತ್ತಲೂ ಜಲಾವೃತವಾಗಿರುವ ಈ ಪ್ರದೇಶದಲ್ಲಿ ಸರಕಾರಿ ಶಾಲೆ ಕಟ್ಟಲು 1958 ರಲ್ಲಿ ಅಂದರೆ ಸುಮಾರು 58 ವರ್ಷಗಳ ಹಿಂದೆ ಇಲ್ಲಿನ ಜನರು ದೋಣಿಯ ಮುಖಾಂತರ ಕಲ್ಲು ಇನ್ನಿತರ ಸಾಮಾಗ್ರಿಗಳನ್ನು ತಂದು ಶಾಲೆಯನ್ನು ಕಟ್ಟಿರುತ್ತಾg.É ಆದರೆ ಇಂದು ರಾಜ್ಯ ಸರಕಾರ ಖಾಸಗಿ ಶಾಲೆಗಳ ಲಾಬಿಗೆ ಮಣಿದು ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದಿಂದ ಸಾವಿರಾರು ಬಡ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟ ಮಾಡುತ್ತಿದೆ. ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ DYFI ನ ನಾಯಕರಾದ ಬಿ. ಕೆ ಇಮ್ತಿಯಾಜ್ ದೂರಿದರು.
DYFI ಮುಖಂಡ ಸಂತೋಷ್ ಬಜಾಲ್ ಮಾತನಾಡುತ್ತ ಈಗಾಗಲೇ ಬೆಂಗರೆ ಶಾಲೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಕನ್ನಡ ಮಾಧ್ಯಮ ಶಿಕ್ಷಣದ ಜೊತೆ ಇಂಗ್ಲೀಷ್ ಶಿಕ್ಷಣವನ್ನು ಇಲ್ಲಿ ಲಭಿಸುವ ವ್ಯವಸ್ಥೆಯನ್ನು ಮಾಡಿದ್ದು ಒಟ್ಟು 550 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ತರಗತಿಗೊಬ್ಬರಂತೆ ಶಿಕ್ಷಕರಿರುತ್ತಾರೆ. ಆದರೆ ಈಗ ಸರಕಾರ ಹೆಚ್ಚುವರಿ ಹೆಸರಿನಲ್ಲಿ ಇಲ್ಲಿನ 3 ಶಿಕ್ಷಕರನ್ನು ವರ್ಗಾಯಿಸುತ್ತದೆ ಹಾಗೂ 2 ಶಿಕ್ಷಕರು ನವೆಂಬರ್ ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಆ ಪ್ರಕಾರ ಒಟ್ಟು 5 ಶಿಕ್ಷಕರ ಕೊರತೆ ಈ ಶಾಲೆ ಎದುರಿಸಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿಕ್ಷಕರ ವರ್ಗಾವಣೆಯನ್ನು ಒಪ್ಪಲು ಸಾಧ್ಯವಿಲ್ಲ . ರಾಜ್ಯ ಸರಕಾರ, ಶಿಕ್ಷಣ ಇಲಾಖೆ ಈ ಕ್ರಮವನ್ನು ಕೈಬಿಡಬೇಕು ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ.
ಇದೇ ಸಂಧರ್ಭದಲ್ಲಿ ಶಾಲೆಗೆ ಅಕ್ಷರ ದಾಸೋಹದ ಅಕ್ಷಯ ಪಾತ್ರೆಯ ವಾಹನವನ್ನು ವಿದ್ಯಾರ್ಥಿಗಳು ತಡೆದು ನಮಗೆ ಅನ್ನ ಬೇಡ ಶಿಕ್ಷಕರು ಬೇಕು ಎಂದು ಘೋಷಣೆ ಕೂಗಿದರು. ಹಾಗೂ ಶಾಲೆಯ ಗೇಟಿಗೆ ಬೀಗ ಜಡಿದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಶಾಲಾ ಅಧ್ಯಕ್ಷೆ ಕೈರುನ್ನೀಸಾ, DYFI ಸ್ಥಳೀಯ ಮುಖಂಡರಾದ ರಿಯಾಜ್, ಹನೀಫ್ ಬೆಂಗರೆ, ವಹಾಬ್, ಅಸ್ಲಾಂ, ಜಮೀಳಾ, ಜಾಕಿರ, ರುಕ್ಯಾ, ಉಮೈರ್, ಆಯಿಷಾ ಬಾನು, ಮುಂತಾದವರು ಉಪಸ್ಥಿತರಿದ್ದರು