ಬೆಂಗಳೂರಿನಲ್ಲಿ ಕಾಣೆಯಾದ ಬಾಲಕ ಬೆಳ್ತಂಗಡಿಯಲ್ಲಿ ಶವವಾಗಿ ಪತ್ತೆ

Spread the love

ಬೆಂಗಳೂರಿನಲ್ಲಿ ಕಾಣೆಯಾದ ಬಾಲಕ ಬೆಳ್ತಂಗಡಿಯಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ: ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕನ ಮೃತದೇಹ ಗುರುವಾಯನಕೆರೆಯ ಕೆರೆಯಲ್ಲಿ ಗುರುವಾರ ಪತ್ತೆಯಾಗಿದೆ.

ಮೃತ ಬಾಲಕನನ್ನು ಬೆಂಗಳೂರಿನ ಹೂಡಿ ಮುನಿಸ್ವಾಮಿ ಲೇಔಟ್ ನಿವಾಸಿ ಪ್ರೇಮ್ ಕುಮಾರ್ (15) ಎಂಬವರ ಪುತ್ರ ಯಶವಂತ ಸಾಯಿ ಎಂದು ಗುರುತಿಲಾಗಿದೆ.

ಜು. 24 ರಂದು ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದ ಬಾಲಕ ಮನೆಗೆ ಮರಳಿರಲಿಲ್ಲ. ಹಾಗಾಗಿ ಬಾಲಕನ ತಾತ ತ್ಯಾಗರಾಜ್​ ಮಹದೇವಪುರ ಠಾಣೆಯಲ್ಲಿ ಮೊಮ್ಮಗ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ದಡದಲ್ಲಿ ಬುಧವಾರ ದಡದಲ್ಲಿಬ್ಯಾಗ್ ಮತ್ತು ಚಪ್ಪಲಿ ಕಂಡು ಬಂದ ಹಿನ್ನೆಲೆಯಲ್ಲಿ ಬಾಲಕನಿಗಾಗಿ ಹುಡುಕಾಟ ನಡೆಸಲಾಗಿತ್ತು. ಬೆಳಗ್ಗೆ ಬಾಲಕನ ಶವ ಕೆರೆಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ.

ಬೆಂಗಳೂರಿನ ಐಟಿಐ ವಿದ್ಯಾಮಂದಿರ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ. ಪತ್ತೆಯಾದ ಬ್ಯಾಗ್​ನಲ್ಲಿ ಐಡಿ ಕಾರ್ಡ್, ಆಧಾರ್ ಕಾರ್ಡ್, ಬಸ್ ಟಿಕೆಟ್ ಪತ್ತೆಯಾಗಿದ್ದು, ಸದ್ಯ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love