ಬೆಂಗಳೂರು: ಅಂತರ್ ಧರ್ಮೀಯ ಸಂವಾದ, ಶಾಂತಿ ಮತ್ತು ಸಾಮರಸ್ಯದ ಕಾರ್ಯಕ್ರಮ
ಬೆಂಗಳೂರು: 2019ನೇ ವರ್ಷವು ಮಧ್ಯಯುಗೀನ ಇಟಲಿಯ ಸಂತ ಅಸಿಸ್ಸಿಯ ಫ್ರಾನ್ಸಿಸ್ ಮತ್ತು ಈಜಿಪ್ಟ್ ದೇಶದ ಸುಲ್ತಾನ್‍ಅಲ್ ಮಲಿಕ್ – ಅಲ್ ಕಾಮಿಲ್ ಭೇಟಿಯಾಗಿ 800 ವರ್ಷಗಳಾಯಿತು ಎಂಬುದನ್ನು ನೆನಪಿಸುತ್ತದೆ. ಫ್ರಾನ್ಸಿಸ್ಕನ್ಸ್ ಎಂಬ ಹೆಸರಿನಿಂದ ಪ್ರಸಿಧ್ದರಾಗಿರುವ ಸಂತ ಫ್ರಾನ್ಸಿಸ್ ಅಸಿಸ್ಸಿಯ ಹಿಂಬಾಲಕರು ಬೆಂಗಳೂರು ಮಹಾಧರ್ಮಕ್ಷೇತ್ರದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಫ್ರಾನ್ಸಿಸ್ಕನ್ಸ್ ಮತ್ತು ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಅತಿ ವಂ. ಡಾ. ಪೀಟರ್ ಮಚಾದೊ ಸಮಕ್ಷಮದಲ್ಲಿ 800 ವರ್ಷದ ಇವರಿಬ್ಬರ ಭೇಟಿಯ ನೆನಪಿನಲ್ಲಿ ಅಂತರ್‍ಧರ್ಮೀಯ ಸಂವಾದ, ಶಾಂತಿ ಮತ್ತು ಸಾಮರಸ್ಯದ ಕಾರ್ಯಕ್ರಮವನ್ನು ದಿನಾಂಕ 27 ಜುಲೈ 2019 ರಂದು ಮಧ್ಯಾಹ್ನ 3.30ಕ್ಕೆ ಸಂತ ಜೋಸೇಫರ ಬಾಲಕರ ಪ್ರೌಡ ಶಾಲಾ ಸಭಾಂಗಣ ಇಲ್ಲಿ ಆಯೋಜಿಸಿರುತ್ತಾರೆ.
ಕ್ರೈಸ್ತರಿಗೆ ಹಾಗೂ ಮುಸಲ್ಮಾನರಿಗೆ ಪವಿತ್ರವಾದಂತಹ ಸ್ಥಳಗಳ ಮೇಲೆ ಹಿಡಿತ ಸಾಧಿಸಲು ಮಧ್ಯಯುಗದಲ್ಲಿ ಕ್ರೈಸ್ತ ಮಿಲಿಟರಿ ಪಡೆಗಳು ಕ್ರೂಸೇಡ್‍ಗಳ ಹೆಸರಿನಲ್ಲಿ ಮುಸಲ್ಮಾನರ ಮೇಲೆ ಯುಧ್ದ ಸಾರುತ್ತಿದ್ದವು. ಕ್ರಿ.ಶ.1219ರಲ್ಲಿ ಈ ಯುಧ್ಧಗಳು ತೀರಾ ಅತಿರೇಖಕ್ಕೆ ಹೋದ ಸಂದರ್ಭದಲ್ಲಿ ಅಸಿಸ್ಸಿಯ ಸಂತ ಫ್ರಾನ್ಸಿಸ್ ಈ ಯುಧ್ಧವನ್ನು ಕೊನೆಗಾಣಿಸಿ ಮಾತುಕತೆಯ ಮೂಲಕ ಪರಿಹರ ಕಂಡುಕೊಳ್ಳುವ ಹಾಗು ಶಾಂತಿಯನ್ನು ಸಾರುವ ನಿಟ್ಟಿನಲ್ಲಿ ಈಜಿಪ್ಟಿನ ದೊರೆ ಸುಲ್ತಾನ್ ಅಲ್ ಮಲಿಕ್ – ಅಲ್ ಕಾಮಿಲ್‍ನನ್ನು ಭೇಟಿ ಮಾಡಲು ಹೊರಟರು. ದಾಮಿಯೆಟ್ಟಾ ಎಂಬ ಪ್ರದೇಶದಲ್ಲಿ ಸುಲ್ತಾನನ್ನು ಭೇಡಿ ಮಾಡಿದ ಸಂತ ಫ್ರಾನ್ಸಿಸ್ ಆತನ ಸಹೋದರ ಸತ್ಕಾರವನ್ನು ಸಂತೋಷದಿಂದ ಸ್ವೀಕರಿಸಿ, ಆತನ ಆಸ್ಥಾನದಲ್ಲಿ ಶಾಂತಿಯ ಪ್ರಭೋಧನೆ ನೀಡಿ ಹರ್ಷಚಿತ್ತದಿಂದ ಇಟಲಿಗೆ ಮರಳಿದರು.
ಸಂತ ಫ್ರಾನ್ಸಿಸ್ ಮತ್ತು ಸುಲ್ತಾನರು ಪರಸ್ಪರರ ಸರಳತೆ, ಶಾಂತಿಯ ಮನೋಭಾವದಿಂದ ಪ್ರಭಾವಿತರಾದರು. ಇವರ ಈ ಭೇಟಿ ಸಂತ ಫ್ರಾನ್ಸಿಸ್ ತಮ್ಮ ಹಿಂಬಾಲಕರಿಗೆ ಹೇಗೆ ಮುಸಲ್ಮಾನರೊಡನೆಯೂ ಶಾಂತಿಯಿಂದ ಜೀವಿಸಬಹುದು ಎಂಬುದನ್ನು ಕಲಿಸಿತು. ಸಂತ ಫ್ರಾನಿಸ್ ಮತ್ತು ಸುಲ್ತಾನರ ಈ ಸೌಹಾರ್ದ ಭೇಟಿ ಇತರ ಧರ್ಮದ ನಮ್ಮ ಸಹೋದರ ಸಹೋದರಿಯರ ಜೊತೆ ಹೇಗೆ ಶಾಂತಿ ಸಾಮರಸ್ಯದಿಂದ ಬಾಳ ಬೇಕೆಂಬುದನ್ನು ಕಲಿಸುತ್ತದೆ. ಸಂತ ಫ್ರಾನ್ಸಿಸ್ ಈ ಸೌಹಾರ್ದ ಭೇಟಿ ನಡೆಸಿ 800 ವರ್ಷಗಳಾದರೂ ಈ ರೀತಿಯ ಒಂದು ನಡೆ ಇಂದಿನ ತುರ್ತು ಅವಶ್ಯಕತೆಯಾಗಿದೆ.
ಈ ವಾರ್ಷಿಕೋತ್ಸವದ ಅಂಗವಾಗಿ ವಿಶ್ವಗುರು ಪೋಪ್ ಫ್ರಾನ್ಸಿಸ್ ರವರು ಅರಬ್ ಸಂಸ್ಥಾನಕ್ಕೆ ಚಾರಿತ್ರಿಕ ಭೇಟಿ ನೀಡಿದರು. ಅಬುದಾಬಿಯಲ್ಲಿನ ಕೈರೋದ ಆಲ್-ಅಝಾರ್ ಮಸೀದಿಯ ಹಿರಿಯ ಇಮಾಮ್ ಆದ ಶೇಖ್ ಅಹ್ಮದ್ ಆಲ್-ತಾಯೇಭ್ ಇವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಭೇಟಿಯು ಮುಕ್ತ ಮನಸ್ಸಿನ ಶಾಂತಿ, ವಿಶ್ವ ಭ್ರಾತೃತ್ವದೊಂದಿಗೆ ಸಾಮರಸ್ಯದಿಂದ ಬಾಳಲು ಉತ್ತೇಜಿಸುವಂತಹ ಆಶಯವನ್ನು ಎತ್ತಿ ತೋರಿಸುತ್ತದೆ. ವಿಶ್ವಗುರು ಪೋಪ್ ಫ್ರಾನ್ಸಿಸ್ ರವರ ಅರಬ್ ಸಂಸ್ಥಾನದ ಈ ಭೇಟಿಯು ನಮಗೆ ಪ್ರೇರಣೆ ನೀಡುವುದಲ್ಲದೆ, ನಾವೂ ಸಹ ಇತರ ಧರ್ಮದ ಸಹೋದರ ಸಹೋದರಿಯರೊಂದಿಗೆ ಶಾಂತಿ ಸಾಮರಸ್ಯದಿಂದ ಸಮಾಜದಲ್ಲಿ ಬಾಳಲು ಉತ್ತೇಜಿಸುತ್ತದೆ.
ದಿನಾಂಕ 27 ಜುಲೈ 2019 ರಂದು ನಡೆಯುವ ಅಂತರ್‍ಧರ್ಮೀಯ ಸಂವಾದ, ಶಾಂತಿ ಮತ್ತು ಸಾಮರಸ್ಯದ ಕಾರ್ಯಕ್ರಮಲ್ಲಿ ವಿವಿಧ ಧರ್ಮಗಳ ಹಲವಾರು ಪ್ರತಿನಿಧಿಗಳು ಹೇಗೆ ನಮ್ಮ ಇಂದಿನ ಕಾಲಘಟ್ಟದಲ್ಲಿ ಪರಸ್ಪರ ಧರ್ಮಗಳ ನಡುವೆ ಸಂವಾದ, ಶಾಂತಿ ಮತ್ತು ಸಾಮರಸ್ಯವನ್ನು ಸಾಧಿಸಬಹುದು ಎಂದು ಉಪನ್ಯಾಸ ನೀಡಲಿದ್ದಾರೆ. ಮಹಾಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್ ಮಚಾದೊ ಈ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ನೀಡಲಿದ್ದಾರೆ. ವಿವಿಧ ಧರ್ಮಗಳ ಹಲವಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಭಾರತವು ಸರ್ವಧರ್ಮೀಯರ ಮಾತೃಭೂಮಿಯಾಗಿದೆ ಮತ್ತು ಎಂದಿಗೂ ಈ ದೇಶ ಸಹಿಷ್ಣುತೆ, ಸಂವಾದ, ಶಾಂತಿ ಮತ್ತು ಸಾಮರಸ್ಯದವನ್ನು ಪ್ರೋತ್ಸಾಹಿಸುವ ದೇಶವಾಗಿದೆ. ಬೆಂಗಳೂರಿನಲ್ಲಿ ಮತ್ತು ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಫ್ರಾನ್ಸಿಸ್ಕನ್ ಸಭೆಯ ಪಾದ್ರಿಗಳು ಮತ್ತು ಸಹೋದರರದು ಇತರ ಧರ್ಮಗಳ ಮೇಲೆ ಗೌರವ ಹೊಂದಿದ್ದಾರೆ ಮತ್ತು ಶಾಂತಿ, ಸಂವಾದ ಮತ್ತು ಸಾಮರಸ್ಯಕ್ಕಾಗಿ ಅವರ ಪಾಲಕ ಅಸಿಸ್ಸಿಯ ಸಂತ ಫ್ರಾನಿಸ್‍ರಂತೆ ಅನವರತ ಶ್ರಮಿಸುತ್ತಿದ್ದಾರೆ.