ಬೆಂಗಳೂರು ಗಲಭೆಗೆ ಕಾರಣರಾದ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆ ನಿಷೇಧಿಸಿ – ಸುನೀಲ್ ಕೆ ಆರ್
ಉಡುಪಿ: ಬೆಂಗಳೂರಿನ ಡಿ ಜೆ ಹಳ್ಳಿ ಮತ್ತು ಕೆ ಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಭಯೋತ್ಪಾದಕ ಸಂಘಟನೆಯಾದ ಐ.ಎಸ್.ಐ ಕೈವಾಡದ ಸಂಶಯವಿದ್ದು ಅದರ ಸಹಕಾರ ಪಡೆಯುವ ಮತೀಯವಾದಿ ಸಂಘಟನೆಗಳಾದ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಯ ನಿಷೇಧಕ್ಕೆ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾದ ಸುನೀಲ್ ಕೆ ಆರ್ ಆಗ್ರಹಿದ್ದಾರೆ.
ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯದ ಬೆಂಗಳೂರಿನ ಡಿ ಜೆ ಹಳ್ಳಿ ಮತ್ತು ಕೆ ಜೆ ಹಳ್ಳಿಯಲ್ಲಿ ನಡೆದ ಗಲಭೆಯು ಒಂದು ಹೇಯ ಕೃತ್ಯವಾಗಿದ್ದು ಕರ್ನಾಟಕದಲ್ಲಿ ಗಲಭೇ ನಡೆಸುವ ವ್ಯವಸ್ಥಿತ ಸಂಚು ಆಗಿರುತ್ತದೆ. ಮೂರು ದಿನದ ಹಿಂದೆ ಕೇಂದ್ರ ಗೃಹ ಇಲಾಖೆ ದೇಶದಲ್ಲಿ ಕೋಮು ಗಲಭೇ ಸೃಷ್ಟಿಸಲು ಐ.ಎಸ್.ಐ ಸಂಚು ರೂಪಿಸುತ್ತದೆ ಎಂದು ವರದಿ ನೀಡಿತ್ತು. ಹಾಗಾಗಿ ಈ ಬೆಂಗಳೂರಿನ ಘಟನೆಯ ಹಿಂದೆ ಪಾಕಿಸ್ತಾನದ ಸಂಸ್ಥೆ ಐ.ಎಸ್.ಐ. ಯ ಕೈವಾಡವಿದೆ ಎಂದು ಸಂಶಯವಿದೆ ಎಂದರು.
ಬೆಂಗಳೂರಿನ ಗಲಭೆಯಲ್ಲಿ ಜನಪ್ರತಿನಿಧಿಯ ಮನೆಗೆ, ಪೊಲೀಸ್ ಠಾಣೆಗೆ, ವಾಹನಗಳಿಗೆ, ದೇವಸ್ಥಾನಕ್ಕೆ ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ಹಾಗೂ ಹಾನಿ ನಡೆದಿದೆ. ಪೊಲೀಸ್ ಠಾಣೆಗೆ ಮತ್ತು ನೂರಾರು ವಾಹನಗಳಿಗೆ ಬೆಂಕಿ ಹಚ್ಚಿ ಭಯೋತ್ಪಾದಕರ ರೀತಿಯಲ್ಲಿ ಕೃತ್ಯವನ್ನು ಎಸಗಿರುತ್ತಾರೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿ ರಾಜ್ಯದಲ್ಲಿ ಕೋಮು ಗಲಭೆ ನಡೆಸುವ ವ್ಯವಸ್ಥಿತ ಷಡ್ಯಂತ್ರವಾಗಿದ್ದು ಈ ಘಟನೆಯ ಹಿಂದೆ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಯ ಕೈವಾಡವಿರುವುದು ಸ್ಪಷ್ಟವಾಗಿದೆ.
ಸರಕಾರ ತಕ್ಷಣ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಯನ್ನು ನಿಷೇಧಿಸಿ ಅದರ ಪ್ರಮುಖರನ್ನು ಬಂಧಿಸಬೇಕು ಈ ಘಟನೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸುವಂತೆ ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳ ಜಿಲ್ಲಾ ಸಂಯೋಜಕರಾದ ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.