ಬೆಂಗಳೂರು: ಬೆಂಗಳೂರು ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಕುಡಿದು ಬೈಕ್ ಚಲಾಯಿಸುತ್ತಿದ್ದ ಅನೀಶ್ ಎಂಬಾತನನ್ನು ತಪಾಸಣೆ ನಡೆಸುತ್ತಿದ್ದಾಗ ತಾನು ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಸಹೋದರಿ ಮಗ ಎಂದು ಸುಳ್ಳು ಹೇಳಿದ್ದಾನೆ. ಆದರೆ ಈ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಭಿತ್ತರವಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ.
ಆರೋಪಿ ಸುಳ್ಳು ಹೇಳಿದ್ದನ್ನು ಸ್ವತಃ ಯು.ಟಿ.ಖಾದರ್ ಅವರಲ್ಲಿ ಕೇಳದೆ ಸುದ್ದಿವಾಹಿನಿಗೆ ಸುಳ್ಳು ಮಾಹಿತಿ ನೀಡಿದ ಸಂಬಂಧಿಸಿದ ಪೊಲೀಸ್ ಪೇದೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಯುಎಇ ಯಲ್ಲಿ ಕಾರ್ಯಕ್ರಮದಲ್ಲಿರುವ ಸಚಿವ ಯು.ಟಿ.ಖಾದರ್ ಅವರು ಪೊಲೀಸ್ ಉನ್ನತಾಧಿಕಾರಿಗೆ ಆಗ್ರಹಿಸಿದ್ದಾರೆ.
ತನಗೆ ಒಬ್ಬನೇ ಸಹೋದರಿ ಮಗನಿದ್ದು ಆತ ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ನಿನ್ನೆ ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಅನೀಶ್ ಯಾರೆಂದೇ ಗೊತ್ತಿಲ್ಲ. ಹೀಗಿದ್ದರೂ ಕಪೋಲಕಲ್ಪಿತ ವರದಿ ಮಾಡಿ ದೃಶ್ಯ ಮಾಧ್ಯಮದಲ್ಲಿ ಬಿತ್ತರಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಅಪಪ್ರಚಾರ ಇದೇ ಮೊದಲಲ್ಲ; ಯು.ಟಿ.ಖಾದರ್ ಬಗ್ಗೆ ಅಪಪ್ರಚಾರ ನಡೆಸುವುದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ನಡೆದಿದೆ. ಮೈತುಂಬಾ ಚಿನ್ನದ ಒಡವೆ ಧರಿಸಿರುವ ಹುಡುಗಿಯೊಬ್ಬಳ ಫೋಟೋದೊಂದಿಗೆ ಯು.ಟಿ.ಖಾದರ್ ಅವರ ಮಗಳ ದುಬಾರಿ ವೆಚ್ಚದ ಮದುವೆ ಫೋಟೋ ಎಂದು ಈ ಹಿಂದೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಆದರೆ ಯು.ಟಿ.ಖಾದರ್ ಗೆ ಒಬ್ಬಳೇ ಪುತ್ರಿಯಿದ್ದು, ಆಕೆ ಹಾಸ್ಟೆಲ್ ನಲ್ಲಿ ತಂದೆಯಂತೆ ಸರಳ ಜೀವನ ನಡೆಸುತ್ತಿದ್ದಾಳೆ. ಈ ಬಗ್ಗೆ ಸಚಿವರ ಅಭಿಮಾನಿಗಳು ಅಪಪ್ರಚಾರಕರ ವಿರುದ್ಧ ಪೊಲೀಸ್ ದೂರು ಕೂಡಾ ನೀಡಿದ್ದರು.