ಬೆಂಗಳೂರು ಮಹಾಧರ್ಮಾಧ್ಯಕ್ಷರ ವಿರುದ್ದ ಸುಳ್ಳು ಆರೋಪ ಸ್ಪಷ್ಟೀಕರಣ
ಬೆಂಗಳೂರು: ಕ್ರೈಸ್ತ ಧಾರ್ಮಿಕ ಕಾನೂನಿನ್ವಯ ಮುಚ್ಚಲಾಗಿರುವ ವಿಶ್ವನಾಥ ನಾಗೇನಹಳ್ಳಿಯ ಸಂತ ವನ ಚಿನ್ನಪ್ಪನವರ ದೇವಾಲಯದಲ್ಲಿ ದಿನಾಂಕ 10.07.2016ರ ಭಾನುವಾರದಂದು ಮೃತಹೊಂದಿದ ಸುಮಾರು 65 ವಯಸ್ಸುಳ್ಳ ವೃದ್ಧೆಯ ಶವವನ್ನು ಮುಂದಿಟ್ಟುಕೊಂಡು ಕೆಲವು ಪಟಭದ್ರ ಹಿತಾಸಕ್ತಿ ಗುಂಪುಗಳು ಸಮಾಜದಲ್ಲಿ ಹಿಂಸೆಗೆ ಪ್ರಚೋದಿಸುತ್ತಾ ಕ್ರೈಸ್ತ ಧರ್ಮಸಭೆಯಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದು, ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷ ಡಾ. ಬರ್ನಾಡ್ ಮೊರಾಸ್ರವರು ಸ್ಪಷ್ಠನೆಯನ್ನು ನೀಡಿದ್ದಾರೆ.
ಮೃತ ದೇಹವನ್ನು ದೇವಾಲಯದಿಂದ ಹೊರತೆಗೆಯಲು ಪ್ರತಿಭಟನಾಕಾರರ ವಿರೋಧ. ಸುಳ್ಳುವದಂತಿಗಳಿಗೆ ಮಹಾಧರ್ಮಾಧ್ಯಕ್ಷರಿಂದ ಸ್ಪಷ್ಟೀಕರಣ
ದಿನಾಂಕ 10.07.2016ರ ಭಾನುವಾರದಂದು ಮೃತಹೊಂದಿದ್ದ ಸುಮಾರು 65 ವರ್ಷ ವಯಸ್ಸುಳ್ಳ ವೃದ್ಧೆಯ ಶವವನ್ನು ಕ್ರೈಸ್ತ ಧಾರ್ಮಿಕ ಕಾನೂನಿನ ಪ್ರಕಾರ ಮುಚ್ಚಲಾಗಿರುವ ವಿಶ್ವನಾಥ ನಾಗೇನಹಳ್ಳಿಯ ಸಂತ ವನಚಿನ್ನಪ್ಪನವರ ದೇವಾಲಯದ ಮುಂದಿಟ್ಟುಕೊಂಡು ಕೆಲವು ಪ್ರತಿಭಟನಾಕಾರರು ಪ್ರತಿಭಟನೆ ಮಾಡುತ್ತಾ ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕುತ್ತಿದ್ದಾರೆ. ಸಂತ ವನಚಿನ್ನಪ್ಪ ದೇವಾಲಯವನ್ನು ಮುಚ್ಚಿದ ಮೇಲೆ ಆ ದೇವಾಲಯಕ್ಕೆ ಸಂಬಂಧಪಟ್ಟ ಭಕ್ತಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸಲು ಪಕ್ಕದ ಧರ್ಮಕೇಂದ್ರವಾದ ಸಂತ ಯಾಗಪ್ಪರ ದೇವಾಲಯ ಮರಿಯಣ್ಣಪಾಳ್ಯ ಇಲ್ಲಿ ನೆರವೇರಿಸಿಕೊಳ್ಳಲು ಮಹಾಧರ್ಮಾಧ್ಯಕ್ಷರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಈ ಪ್ರತಿಭಟನಾಕಾರರು ಅನಾವಶ್ಯಕವಾಗಿ ಅಂತಿಮ ಸಂಸ್ಕಾರವನ್ನು ನೆರವೇರಿಸಲು ಸಂತ ಯಾಗಪ್ಪರ ದೇವಾಲಯದ ಗುರುಗಳು ಒಪ್ಪುತ್ತಿಲ್ಲವೆಂದು ತಪ್ಪು ವದಂತಿಯನ್ನು ಹರಡುತ್ತಿದ್ದಾರೆ.
ಈ ತಪ್ಪು ಮಾಹಿತಿಯನ್ನು ಹರಡುತ್ತಿರುವ ಈ ಪ್ರತಿಭಟನಾಕಾರರು ಧರ್ಮಸಭೆಯ ಪಾಲನಾ ಕಾರ್ಯ ಹಾಗೂ ಆಡಳಿತಕ್ಕೆ ಸಂಬಂಧಪಟ್ಟ ಯಾವ ಹಕ್ಕುಗಳನ್ನು ಹೊಂದಿರುವುದಿಲ್ಲ. ಇಂತಹ ವ್ಯಕ್ತಿಗಳು ಆಧಾರರಹಿತ ಹಾಗೂ ತಪ್ಪು ಮಾಹಿತಿಗಳನ್ನೊಳಗೊಂಡ ವಿಷಯಗಳನ್ನು ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳಲ್ಲಿ ತಪ್ಪುತಪ್ಪಾಗಿ ಮಹಾಧರ್ಮಾಧ್ಯಕ್ಷರ ವಿರುದ್ಧವಾಗಿ ಪ್ರಕಟಿಸುತ್ತಾ ಧರ್ಮಸಭೆಯಲ್ಲಿನ ಶಾಂತಿಗೆ ಭಂಗ ತರುತ್ತಿದ್ದಾರೆ.
ಸಂತ ವನಚಿನ್ನಪ್ಪನವರ ದೇವಾಲಯವನ್ನು ಮಹಾಧರ್ಮಾಧ್ಯಕ್ಷ ಡಾ. ಬರ್ನಾಡ್ ಮೊರಾಸ್ರವರು ಕ್ರೈಸ್ತ ಧಾರ್ಮಿಕ ನಿಯಮಗಳಡಿಯಲ್ಲಿ ದಿನಾಂಕ 21/04/2016 ರಂದು ತಮ್ಮ ಅಧಿಕಾರವನ್ನು ಬಳಸಿ ಮುಚ್ಚಿದ್ದಾರೆಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಈ ಕಾರ್ಯ ಮಹಾಧರ್ಮಾಧ್ಯಕ್ಷರಿಗೆ ಬಹಳ ನೋವನ್ನುಂಟು ಮಾಡಿತ್ತಾದರೂ ಧರ್ಮಸಭೆಯ ಹಿತಾಸಕ್ತಿಯಿಂದ ಇವರು ಕ್ರೈಸ್ತ ಧಾರ್ಮಿಕ ನಿಯಮಗಳನ್ನು ಪಾಲಿಸಲೇಬೇಕಾಗಿತ್ತು. ಕ್ರೈಸ್ತ ಧಾರ್ಮಿಕ ಕಾನೂನಿನ 1187 ರ ಪ್ರಕಾರ ಸಂತರು ಅಥವಾ ಪುನೀತರು ಎಂದೆನಿಸಿಕೊಳ್ಳುವ ವ್ಯಕ್ತಿಗಳ ಪ್ರತಿಗಳನ್ನು ದೇವಾಲಯದ ಅಥವಾ ಅವರ ಆವರಣದಲ್ಲಿ ಸ್ಥಾಪಿಸುವ ಅವಕಾಶವನ್ನು ಹೊಂದಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗೂ ಯಾವುದೇ ಪುತ್ಥಳಿ ಅಥವಾ ಪ್ರತಿಮೆಯನ್ನು ದೇವಾಲಯದ ಆವರಣದಲ್ಲಿ ಸ್ಥಾಪಿಸಬೇಕಾದರೆ ಮಹಾಧರ್ಮಾಧ್ಯಕ್ಷರ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಕ್ರೈಸ್ತ ಧಾರ್ಮಿಕ ಕಾನೂನನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದೆಂದು ಮಹಾಧರ್ಮಾಧ್ಯಕ್ಷರು ಅಲ್ಲಿನ ಧರ್ಮಗುರುಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿದ್ದರೂ ಕೂಡ ನಿಧನ ಹೊಂದಿದ ಬೆಂಗಳೂರು ಮಹಾಧರ್ಮಕ್ಷೇತ್ರದ ವಂ. ಸ್ವಾಮಿ ಸಿ. ಸೆಲ್ವರಾಜ್ರವರ ಪ್ರತಿಮೆಯನ್ನು ದೇವಾಲಯದ ಆವರಣದಲ್ಲಿ ಕ್ರೈಸ್ತ ಧಾರ್ಮಿಕ ಕಾನೂನಿಗೆ ವಿರುದ್ಧವಾಗಿ ಸ್ಥಾಪಿಸಲಾಗಿದೆ. ಈ ಕಾರಣಕ್ಕಾಗಿ ಸಂತ ವನಚಿನ್ನಪ್ಪರ ದೇವಾಲಯವನ್ನು ಮುಚ್ಚಲಾಗಿದೆ. ದೇವಾಲಯ ಏಕೆ ಮುಚ್ಚಲಾಗಿದೆ? ಎಂಬುದಕ್ಕೆ ಸ್ಪಷ್ಟವಾಗಿ ವಿವರಣೆ ನೀಡಿದ್ದರೂ ಕೆಲವು ಪ್ರತಿಭಟನಾಕಾರರು ವಿನಾಕಾರಣ ಉಪವಾಸ ಸತ್ಯಾಗ್ರಹ ಮಾಡುವ ನೆಪದಲ್ಲಿ ಶಾಂತಿಯನ್ನು ಕದಡುತ್ತಾ ದೇವಾಲಯವನ್ನು ತೆರೆಯುವಂತೆ ವ್ಯರ್ಥ ಒತ್ತಾಯ ಮಾಡುತ್ತಿದ್ದಾರೆ.
ಸತ್ತ ವೃದ್ಧೆ ಚಿನ್ನಮ್ಮ ಚೌರಪ್ಪ (65) ರವರ ಅಂತ್ಯ ಸಂಸ್ಕಾರವನ್ನು ನಡೆಸಲು ನಿರಾಕರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಈ ಆರೋಪ ಶುದ್ಧ ಸುಳ್ಳಿನಿಂದ ಕೂಡಿದಂತದ್ದಾಗಿದೆ. ಈ ಮೂಲಕ ಕೋಮು ಸೌಹಾರ್ದತೆಯನ್ನು ಕದಡುವ ಹುನ್ನಾರ ಇದಾಗಿದೆ. ಸಂತ ವನ ಚಿನ್ನಪ್ಪನವರ ಭಕ್ತ ಜನರ ಆಧ್ಯಾತ್ಮಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮಹಾಧರ್ಮಾಧ್ಯಕ್ಷರಾದ ಡಾ. ಬರ್ನಾಡ್ ಮೊರಾಸ್ರವರು ದಿನಾಂಕ 4/5/2016 ರಂದು ಬರೆದ ಪತ್ರದಲ್ಲಿ ದೇವಾಲಯ ಮುಚ್ಚಿರುವ ಪರಿಣಾಮ ಭಕ್ತಾದಿಗಳ ಆಧ್ಯಾತ್ಮಿಕ ಅವಶ್ಯಕತೆಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಧರ್ಮಕೇಂದ್ರದ ಎಲ್ಲಾ ಸದಸ್ಯರಿಗೆ ತಿಳಿಸಿದ್ದಾರೆ. ಮಹಾಧರ್ಮಾಧ್ಯಕ್ಷರು ಈ ಪರ್ಯಾಯ ವ್ಯವಸ್ಥೆಯನ್ನು ಭಕ್ತಾದಿಗಳ ಹಿತದೃಷ್ಟಿಯಿಂದ ಮಾಡಿದ್ದಾರೆ.
ಕ್ರೈಸ್ತ ಧಾರ್ಮಿಕ ನಿಯಮಗಳಿಗೆ ವಿರುದ್ಧವಾಗಿ ಸ್ಥಾಪಿಸಲಾಗಿರುವ ಗುರುವಿನ ಪುತ್ಥಳಿಯನ್ನು ತೆಗೆಯುವವರೆಗೂ ಸಂತ ವನಚಿನ್ನಪ್ಪನವರ ಧರ್ಮಕೇಂದ್ರ ಭಕ್ತಾದಿಗಳ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸಲು ಪಕ್ಕದ ಧರ್ಮಕೇಂದ್ರವಾದ ಮರಿಯಣ್ಣಪಾಳ್ಯದ ಸಂತ ಯಾಗಪ್ಪರ ದೇವಾಲಯದಲ್ಲಿ ನೆರವೇರಿಸಿಕೊಳ್ಳುವ ಅವಕಾಶವನ್ನು ಮಹಾಧರ್ಮಾಧ್ಯಕ್ಷರು ಮಾಡಿಕೊಟ್ಟಿದ್ದಾರೆ. ಸಂತ ಯಾಗಪ್ಪರ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳು ನಾಗೇನಹಳ್ಳಿ ಸಂತ ವನಚಿನ್ನಪ್ಪನವರ ದೇವಾಲಯವನ್ನು ಅಧಿಕೃತವಾಗಿ ತೆರೆಯುವವರೆಗೂ ಅಲ್ಲಿನ ಭಕ್ತಾದಿಗಳ ಎಲ್ಲಾ ಆಧ್ಯಾತ್ಮಿಕ ಬೇಡಿಕೆಗಳನ್ನು ಪೂರೈಸಬೇಕೆಂದು ಮಹಾಧರ್ಮಾಧ್ಯಕ್ಷರು ನಿರ್ದೇಶನವನ್ನು ನೀಡಿದ್ದಾರೆ.
ಈ ರೀತಿಯ ವದಂತಿಗಳನ್ನು ಹರಡುತ್ತಿರುವ ಪ್ರತಿಭಟನಾಕಾರರು ಧರ್ಮಸಭೆಯ ಪಾಲನಾ ಕಾರ್ಯ ಹಾಗೂ ಆಡಳಿತ ವಿಷಯಕ್ಕೆ ಸಂಬಂಧಪಟ್ಟವರಲ್ಲ.
ಈ ಪ್ರತಿಭಟನಾಕಾರರು ಮಹಾಧರ್ಮಾಧ್ಯಕ್ಷರಾದ ಡಾ. ಬರ್ನಾಡ್ ಮೊರಾಸ್ರವರು ಕಥೋಲಿಕ ಭಕ್ತಾದಿಗಳ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ಅನಾವಶ್ಯಕವಾಗಿ ಆರೋಪ ಮಾಡುತ್ತಾರೆ. ಮೃತ ಮಹಿಳೆಯ ಅಂತಿಮ ಸಂಸ್ಕಾರಕ್ಕೆ ತಡೆ ಒಡ್ಡುತ್ತಿದ್ದಾರೆ ಹಾಗಾಗಿ ಈ ಪ್ರತಿಭಟನಾಕಾರರು ಮಾಡುತ್ತಿರುವ ಆರೋಪಗಳಿಗೆ ಸರಿಯಾದ ಆಧಾರವಿಲ್ಲ. ಎಲ್ಲಾ ಆರೋಪಗಳು ಅಸತ್ಯದಿಂದ ಕೂಡಿದೆ. ವಾಸ್ತವತೆಯನ್ನು ತಿರುಚಿ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದು ಧರ್ಮಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.