Home Mangalorean News Kannada News ಬೆಂಗಳೂರು: ಸಿಲಿಂಡರ್ ಸ್ಫೋಟಕ್ಕೆ ಕಟ್ಟಡ ಕುಸಿತ, 7 ಸಾವು; ತಲಾ 5 ಲಕ್ಷ ರೂ. ಪರಿಹಾರ

ಬೆಂಗಳೂರು: ಸಿಲಿಂಡರ್ ಸ್ಫೋಟಕ್ಕೆ ಕಟ್ಟಡ ಕುಸಿತ, 7 ಸಾವು; ತಲಾ 5 ಲಕ್ಷ ರೂ. ಪರಿಹಾರ

Spread the love

ಬೆಂಗಳೂರು: ಸಿಲಿಂಡರ್ ಸ್ಫೋಟಕ್ಕೆ ಕಟ್ಟಡ ಕುಸಿತ, 7 ಸಾವು; ತಲಾ 5 ಲಕ್ಷ ರೂ. ಪರಿಹಾರ

ಬೆಂಗಳೂರು: ಅಡುಗೆ ಮನೆಯಲ್ಲಿದ್ದ ಸಿಲಿಂಡರ್’ವೊಂದು ಸ್ಫೋಟಗೊಂಡ ಪರಿಣಾಮ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದ್ದು, ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಈಜಿಪುರದ ಗುಂಡಪ್ಪ ಲೇಔಟ್’ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಶರವಣ (31), ಅಶ್ವಿನಿ (27), ಕಲಾವತಿ (68), ರವಿಚಂದ್ರನ್ (45) ಎಂದು ಗುರ್ತಿಸಲಾಗಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಅಂತಸ್ತಿನ ಮನೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ. ಪರಿಣಾಮ ಈ ವರೆಗೂ 7 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದರಂತೆ ಈವರೆಗೂ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆಗೊಳಪಟ್ಟವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ರಕ್ಷಣೆಗೊಂಡ ನಾಲ್ವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಮೃತದೇಹಗಳನ್ನು ಹೊರತೆಗೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ದುರ್ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ದಳದ ಅಧಿಕಾರಿಗಳು, ಘಟನೆ ಬೆಳಿಗ್ಗೆ 6.50ರ ಸುಮಾರಿಗೆ ನಡೆದಿದೆ. ಸಿಲಿಂಡರ್ ಸೋರಿಕೆಯಾದ ಪರಿಣಾಮದ ಸ್ಫೋಟ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿರುವ ರಭಸಕ್ಕೆ ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡ 30 ವರ್ಷದಷ್ಟು ಹಳೆಯದಾಗಿದ್ದು, ಮೂರು ಕುಟುಂಬಗಳು ವಾಸವಿತ್ತು ಎಂದು ಹೇಳಿದ್ದಾರೆ.

ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸುರೇಶ್, ಸೋಮಶೇಖರ್, ಮತ್ತದು ಸುಭಾಷ್ ಎಂಬುವವರಿಗೂ ಗಾಯಗಳಾಗಿದೆ. ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗೋಡೆಯೊಂದು ಕುಸಿದುಬಿದ್ದ ಪರಿಣಾಮ ಮೂವರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಮೂವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಗೋಡೆಗಳು ಬಿರುಕು ಬಿಟ್ಟಿತ್ತು. ಈ ಬಗ್ಗೆ ಮನೆಯ ಮಾಲೀಕ ಗುಣೇಶ್ ಅವರಿಗೆ ತಿಳಿಸಿದ್ದರೂ ಅವರು ನಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸದೆ, ಸಮಸ್ಯೆಯನ್ನು ಬಗೆಹರಿಸಿರಲಿಲ್ಲ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ.

ಕಟ್ಟಡದ ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿಕೊಂಡಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಪರಿಶೀಲನೆ ನಡೆಸಿದ್ದಾರೆ.

ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಗುಣೇಶ್ ಎಂಬುವವರು ನಾಲ್ಕು ಕುಟುಂಬಗಳಿಗೆ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ನೆಲ ಮಹಡಿಯಲ್ಲಿ ಎರಡು ಕುಟುಂಬಗಳು ಹಾಗೂ ಮೊದಲನೇ ಮಹಡಿಯಲ್ಲಿ ಒಂದು ಕುಟುಂಬ ವಾಸವವಿತ್ತು. ಮೃತಪಟ್ಟಿರುವ ಕಲಾವತಿ ಹಾಗೂ ರವಿಚಂದ್ರನ್ ಅವರು ಮೊದಲನೇ ಮಹಡಿಯಲ್ಲಿದ್ದರು. ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಇಬ್ಬರೂ ಮಕ್ಕಲು ಸುರಕ್ಷಿತರಾಗಿದ್ದಾರೆ. ನೆಲಮಹಡಿಯಲ್ಲಿದ್ದ ಎರಡು ಕುಟುಂಬಗಳು ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರಬಹುದು ಎಂದು ಹೇಳಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೇಯರ್ ಆರ್. ಸಂಪತ್ ರಾಜ್ ಅವರು, ಕಟ್ಟಡದಲ್ಲಿ ನಾಲ್ಕು ಕುಟುಂಬಗಳು ವಾಸವಿತ್ತು. ಇದೀಗ ಅಗ್ನಿ ಶಾಮಕ ದಳದ ಸಿಬ್ಬಂದಿ, ಎನ್’ಡಿಆರ್’ಎಫ್ ಪಡೆಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ರೂ. 5 ಲಕ್ಷ ಪರಿಹಾರ ಘೋಷಣೆ
ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬಸ್ಥರಿಗೆ ರೂ. 5 ಲಕ್ಷ ಹಾಗೂ ಗಾಯಾಗಳುಗಳಿಗೆ ರೂ.50,000 ಪರಿಹಾರ ನೀಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಘೋಷಣೆ ಮಾಡಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದುರ್ಘಟನೆಯಲ್ಲಿ ಬಾಲಕಿಯೊಬ್ಬಳ ಪೋಷಕರು ಮೃತಪಟ್ಟಿದ್ದು, ಬಾಲಕಿಯನ್ನು ಇದೀಗ ರಕ್ಷಣೆ ಮಾಡಲಾಗಿದೆ. ಬಾಲಕಿಯನ್ನು ದತ್ತು ಪಡೆದುಕೊಳ್ಳಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆಕೆಯ ಭವಿಷ್ಯದ ಖರ್ಚುವೆಚ್ಚೆಗಳನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.

ನೆಲ ಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ ಸಿಲಿಂಡರ್ ಗಳನ್ನು ಬಳಕೆ ಇರಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಸಿಲಿಂಡರ್ ಸ್ಫೋಟದಿಂದಲೇ ಕಟ್ಟಡ ಕುಸಿದು ಬಿದ್ದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.


Spread the love

Exit mobile version