ಬೆಳ್ತಂಗಡಿಯಲ್ಲಿ ರಸ್ತೆಯ ನಟ್ಟನಡುವೆ ಐಟಿಐ ಕಾಲೇಜಿನ ಉಪನ್ಯಾಕನ ಹತ್ಯೆ
ಮಂಗಳೂರು: ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಮುಂಡೂರು ಗ್ರಾಮದ ಕೋಟಿಕಟ್ಟೆಯಲ್ಲಿ ಮಾಲಾಡಿ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಸ್ತೆಯ ನಟ್ಟನಡುವೆ ಹತ್ಯೆ ಮಾಡಲಾಗಿದೆ.
ವಿಕ್ರಂ ಜೈನ್ (45) ಕೊಲೆಯಾದವರು. ಸೋಮವಾರ ರಾತ್ರಿ 10 ಗಂಟೆಯಲ್ಲಿ ವಿಕ್ರಂ ಜೈನ್ ಕೆಲವು ಯುವಕರೊಂದಿಗೆ ಮುಂಡೂರಿನಲ್ಲಿ ಇದ್ದರು ಎನ್ನಲಾಗಿದೆ. ಇದೇ ಯುವಕರ ಗುಂಪು ನಂತರದಲ್ಲಿ ಮಚ್ಚು, ಲಾಂಗ್ ಮತ್ತು ಚೂರಿಗಳನ್ನು ಬಳಸಿ ಹಲ್ಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹೊಟ್ಟೆ ಮತ್ತು ತಲೆಯ ಭಾಗಕ್ಕೆ ಲಾಂಗ್ನಿಂದ ಹೊಡೆದಿರುವ ದುಷ್ಕರ್ಮಿಗಳು, ಕಿಬ್ಬೊಟ್ಟೆಗೆ ಚೂರಿಯಿಂದ ಇರಿದಿದ್ದಾರೆ. ಹಲ್ಲೆಗೆ ಬಳಸಿರುವ ಒಂದು ಲಾಂಗ್ ರಸ್ತೆ ಬದಿಯಲ್ಲೇ ಬಿದ್ದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಿಚಿತರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.