Home Mangalorean News Kannada News ಬೆಳ್ತಂಗಡಿ:  ಅಕ್ರಮ ಕಲ್ಲಿನ ಕ್ವಾರಿಗೆ ಪೊಲೀಸ್ ದಾಳಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಹಿತ ಹಲವರ...

ಬೆಳ್ತಂಗಡಿ:  ಅಕ್ರಮ ಕಲ್ಲಿನ ಕ್ವಾರಿಗೆ ಪೊಲೀಸ್ ದಾಳಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಹಿತ ಹಲವರ ಬಂಧನ

Spread the love

ಬೆಳ್ತಂಗಡಿ:  ಅಕ್ರಮ ಕಲ್ಲಿನ ಕ್ವಾರಿಗೆ ಪೊಲೀಸ್ ದಾಳಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಹಿತ ಹಲವರ ಬಂಧನ

ಬೆಳ್ತಂಗಡಿ: ತಾಲೂಕಿನ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕ್ವಾರಿಗೆ ಶನಿವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ ಪೊಲೀಸರ ತಂಡ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿದ್ದು ಸ್ಫೋಟಕಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಲ್ಲದೆ, ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

ಈ ಕಲ್ಲಿನ ಕ್ವಾರಿ ಯಾವುದೇ ಸಮರ್ಪಕವಾದ ದಾಖಲೆಗಳಿಲ್ಲದೆ ಕಾರ್ಯಾಚರಿಸುತ್ತಿತ್ತೆನ್ನಲಾಗಿದ್ದು, ಇದನ್ನು ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಒಂದು ಹಿಟಾಚಿ, ಒಂದು ಕಂಪ್ರೆಸರ್ ಮೆಷಿನ್, ಒಂದು ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ಸಮಯಗಳಿಂದ ಇಲ್ಲಿ ಕಲ್ಲಿನ ಅಕ್ರಮವಾಗಿ ಕ್ವಾರಿ ನಡೆಯುತ್ತಿದ್ದು, ಈ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ತಹಶೀಲ್ದಾರರು ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯುವ ಮೋರ್ಚಾ ಅಧ್ಯಕ್ಷನ ಬಂಧನ ಪ್ರತಿಭಟನೆ

ಅಕ್ರಮ ಕಲ್ಲಿನ ಕಲ್ಲಿನ ಕ್ವಾರಿ ನಡೆಸುತ್ತಿ ಆರೋಪದಲ್ಲಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯ ಬಂಧನ ಖಂಡಿಸಿ ಯುವ ಮೋರ್ಚಾ ಕಾರ್ಯಕರ್ತರು ತಡರಾತ್ರಿ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜಾ ಕೂಡಾ ಠಾಣೆಯ ಎದುರು ಧರಣಿ ಕುಳಿತು ಶಶಿರಾಜ್ ಶೆಟ್ಟಿ ಬಂಧಿಸಿದ ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ರಾತ್ರಿ ಮನೆಗೆ ನುಗ್ಗಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದರು.

ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸರಕಾರದ, ಪೊಲೀಸರ ಈ ನೀತಿಯ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಬೆಳಗ್ಗಿನ ಜಾವದ ವರೆಗೂ ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾವ್ ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರ ತಂಡ ಠಾಣೆಯ ಎದುರು ಜಮಾಯಿಸಿದ್ದರು.


Spread the love

Exit mobile version