Home Mangalorean News Kannada News ಬೆಳ್ತಂಗಡಿ: ಧರ್ಮಸ್ಥಳದಲ್ಲಿ 44ನೇ ವರ್ಷದ ಉಚಿತ ಸಾಮೂಹಿಕ ವಿವಾಹ : 143 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ 44ನೇ ವರ್ಷದ ಉಚಿತ ಸಾಮೂಹಿಕ ವಿವಾಹ : 143 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Spread the love

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಗುರುವಾರ ಎಲ್ಲೆಲ್ಲೂ ಮದುವೆ ಮನೆಯ ಸಂಭ್ರಮ-ಸಡಗರ. ಅಮೃತವರ್ಶಿಣಿ ಸಭಾ ಭವನದಲ್ಲಿ ಸಂಜೆ 5.58ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 143 ಜೋಡಿ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಗುರುವಾರ ಬೆಳಿಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ (ತನ್ನ ನಿವಾಸದಲ್ಲಿ) ವಧುವಿಗೆ ಸೀರೆ, ರವಿಕೆ ಕಣ ಹಾಗೂ ವರನಿಗೆ ಧೋತಿ, ಶಾಲು ನೀಡಿದರು. ಸಂಜೆ ವೈಭವದ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣಿ ಬಂದು ಅಮೃತವರ್ಶಿಣಿ ಸಭಾ ಭವನಕ್ಕೆ ಹೋದರು.
ಆಯಾ ಜಾತಿ ಪದ್ಧತಿಗನುಗುಣವಾಗಿ ಪ್ರತ್ಯೇಕ ಮದುವೆ ಮಂಟಪಗಳನ್ನು ರಚಿಸಿದ್ದು ಅಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು. ಬಳಿಕ ಹೆಗ್ಗಡೆಯವರು ಮತ್ತು ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿದರು.
ಗೋಧೂಳಿ ಲಗ್ನ ಮುಹೂರ್ತದಲ್ಲಿ 5.58ಕ್ಕೆ ವೇದ ಮಂತ್ರ ಘೋಷ ಪಠಣದೊಂದಿಗೆ ಸಾಮೂಹಿಕ ವಿವಾಹ ನಡೆಯಿತು. 23 ಜೊತೆ ಅಂತರ್ಜಾತಿಯ ವಿವಾಹವಾದರೆ 26 ಜೊತೆ ಪರಿಶಿಷ್ಟ ಜಾತಿಯವರು ಮದುವೆಯಾದರು.
ವಧೂ-ವರರ ಪ್ರಮಾಣ ವಚನ: ಧರ್ಮಸ್ಥಳದಲ್ಲಿ ಇಂದು ಮಂಗಲ ಮುಹೂರ್ತದಲ್ಲಿ ವಧೂ-ವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮದಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೆ ತುತ್ತಾಗದೆ ಬದುಕುತ್ತೇವೆ ಎಂದು ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮತ್ತು ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣ ವಚನ ಬದ್ಧರಾಗುತ್ತಿದ್ದೇವೆ.
ನೂತನ ದಂಪತಿಗಳಿಗೆ ಶುಭ ಹಾರೈಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಅಂತರ್ಜಾತಿಯ ವಿವಾಹವಾದ ದಂಪತಿಗೆ ರೂ. 50 ಸಾವಿರ ಹಾಗೂ ಪರಿಶಿಷ್ಟ ಜಾತಿಯ ದಂಪತಿಗೆ ಒಂದು ಲಕ್ಷ ರೂ. ನೆರವನ್ನು ಸರ್ಕಾರ ನೀಡುತ್ತಿದೆ. ಸಮಾಜದಲ್ಲಿ ಜಾತಿ-ಮತ ಬೇಧ ಹೋಗಲಾಡಿಸಿ ಸಮಾನತೆ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವುದೇ ಇದರ ಉದ್ದೇಶವಾಗಿದೆ. ಜಾತಿ ಗಣತಿಯ ಉದ್ದೇಶವೂ ಸಮಾನತೆ ಸಾಧಿಸುವುದೇ ಆಗಿದೆ ಎಂದರು.
ನಮ್ಮ ಉತ್ತಮ ಗುಣ-ನಡತೆಯಿಂದ ಆದರ್ಶ ಜೀವನ ನಡೆಸಿ ನಮ್ಮ ಮಕ್ಕಳನ್ನು ಸಮಾಜದ ಸಭ್ಯ ನಾಗರಿಕರಾಗಿ ರೂಪಿಸಬೇಕು. ನಾವು ಭವಿಷ್ಯದ ಬಗ್ಗೆ ಉತ್ತಮ ಕನಸು ಕಂಡು ದೊಡ್ಡ ಸಾಧನೆ ಮಾಡಬೇಕು. ಸಮಾಜಕ್ಕೆ ನಮ್ಮ ಕೈಲಾದ ಕೊಡುಗೆ ನೀಡಬೇಕು. ಸಮಾಜ ಸೇವೆಯಲ್ಲಿ ಹೆಗ್ಗಡೆಯವರ ಕೊಡುಗೆ ಅಪಾರ ಎಂದು ಶ್ಲಾಘಿಸಿ ಅಭಿನಂದಿಸಿದರು.

SDK_2563

ಸಾತ್ನಾದ ಸುಧೀರ್ ಜೈನ್ ಮತ್ತು ಶಾಸಕ ಕೆ. ವಸಂತ ಬಂಗೇರ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ. ಜೀವನದಲ್ಲಿ ಮದುವೆ ಎಂಬುದು ಅತ್ಯಂತ ಸಂಭ್ರಮ ಮತ್ತು ಸಂತಸದ ಸಂದರ್ಭವಾಗಿದೆ. ಸರಳ ರೀತಿಯಲ್ಲಿ ವಿವಾಹ ಮಾಡಬೇಕು. ಸಂಪ್ರದಾಯದ ಹೆಸರಿನಲ್ಲಿ ಮದುವೆಗಾಗಿ ದುಂದು ವೆಚ್ಚ ಮಾಡಬಾರದು. ಸರ್ಕಾರದ ಸವಲತ್ತುಗಳ ಸದುಪಯೋಗ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನೂತನ ದಂಪತಿಗಳು ಯಾವುದೇ ದುರಾಭ್ಯಾಸಕ್ಕೆ ಬಲಿಯಾಗದೆ ನೈತಿಕತೆಯೊಂದಿಗೆ ಹೊಣೆಗಾರಿಕೆಯಿಂದ ಆದರ್ಶ ಜೀವನ ನಡೆಸಬೇಕು ಎಂದೂ ವಿರಸ ಮಾಡಬಾರದು. ವಿಚ್ಛೇದನಕ್ಕೂ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆ, ಆಶಾ ಮಂಗಳೂರು. ಡಿ. ಹರ್ಶೇಂದ್ರ ಕುಮಾರ್, ಸುಪ್ರಿಯಾ ಹರ್ಶೇಂದ್ರ ಕುಮಾರ್, ರಶ್ಮಿ ಜೈನ್ ಮತ್ತು ಸಿ.ಡಿ.ಪಿ.ಒ. ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ನೇಪಾಳಕ್ಕೆ ಧರ್ಮಸ್ಥಳದ ಅಭಯಹಸ್ತ
ಧರ್ಮಸ್ಥಳದ ವತಿಯಿಂದ ನೇಪಾಳದ ಸಂತ್ರಸ್ತರಿಗೆ ಒಂದು ಕೋಟಿ ರೂ. ನೆರವನ್ನು ನೀಡಲಾಗುವುದು ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಾಸ್ಥಳದಲ್ಲಿ ಗುರುವಾರ ಪ್ರಕಟಿಸಿದರು.
ಇದನ್ನು ವಸ್ತು ರೂಪದಲ್ಲಿ ನೀಡಲು ನಿರ್ಧರಿಸಿದ್ದು ಅಕ್ಕಿ ಪೂರೈಕೆ ಮತ್ತು ಸಂಚಾರಿ ಶಸ್ತ್ರ ಚಿಕಿತ್ಸಾ ಘಟಕಕ್ಕೆ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಹೆಗ್ಗಡೆಯವರ ನೇತೃತ್ವದಲ್ಲಿ ಅಮೃತವರ್ಶಿಣಿ ಸಭಾ ಭವನದಲ್ಲಿ ನೇಪಾಳ ಸಂತ್ರಸ್ತರ ನೋವು, ದುಃಖ ದೂರವಾಗುವಂತೆ ಎರಡು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.


Spread the love

Exit mobile version