ಬೆಳ್ಳಂಬೆಳಗ್ಗೆ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ಮತ ಯಾಚನೆ ಮಾಡಿದ ಪ್ರಮೋದ್ ಮಧ್ವರಾಜ್
ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಬೆಳ್ಳಂಬೆಳಗ್ಗೆ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರು ಈ ಬಾರಿ ತನ್ನನ್ನು ಬೆಂಬಲಿಸುವಂತೆ ಕೋರಿ ಮತ ಯಾಚನೆ ಮಾಡಿದರು.
ಮುಂಜಾನೆ 6 ಗಂಟೆಗೆ ತನ್ನ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಬಂದರಿಗೆ ಆಗಮಿಸಿದ ಪ್ರಮೋದ್ ಬಿರುಸಿನ ಮತ ಪ್ರಚಾರ ನಡೆಸಿದರು. ಮೀನುಗಾರರು ಪ್ರಮೋದ್ ಅವರು ತಮ್ಮ ಸಮುದಾಯದ ನಾಯಕ ಎಂಬ ಅಭಿಮಾನದಿಂದ ಶುಭ ಹಾರೈಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮೀನುಗಾರಿಕಾ ಅಭಿವೃದ್ಧಿಗೆ ಕೋಟ್ಯಾಂತರ ಅನುದಾನ ನೀಡಿದ್ದು, ಮಲ್ಪೆಯಲ್ಲಿ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ, ಬಂದರಿನಲ್ಲಿ ಸುಮಾರು7.75 ಕೋಟಿ ವೆಚ್ಚದಲ್ಲಿ ಡ್ರಜ್ಜಿಂಗ್ ಕಾಮಗಾರಿ, ಉಡುಪಿಯ ಹಳೆ ಮೀನು ಮಾರುಕಟ್ಟೆಯನ್ನು 2.30 ಕೋಟಿ ರೂ ಅನುದಾನದಲ್ಲಿ ನವೀಕರಿಸಿ ದೇಶದಲ್ಲೇ ಪ್ರಥಮ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣ, ಶಿಥಿಲಾವಸ್ಥೆಯಲ್ಲಿ ಇದ್ದ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ಸುಸಜ್ಜಿತವಾಗಿ ಅಭಿವೃದ್ಧಿ, ಬಂದರಿನಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ಮೀನು ಏಲಂ ಮಾಡುವ ನೆಲಕ್ಕೆ ಮಾರ್ಬಲ್ ಅಳವಡಿಸಿ ಶುಚಿತ್ವಕ್ಕೆ ಒತ್ತು, ಒಣಮೀನು ಒಣಗಿಸುವ ಪ್ರದೇಶದಲ್ಲಿ ಕುಡಿಯುವ ನೀರು ವ್ಯವಸ್ಥೆ, ಹೈಮಾಸ್ಟ್ ದೀಪ ಅಳವಡಿಸಿ ಮೀನು ಕಳ್ಳತನಕ್ಕೆ ಬ್ರೇಕ್ ಹಾಕಲಾಗಿದೆ.
ಅಲ್ಲದೆ ಮೀನುಗಾರ ನ್ಯಾಯಯುತವಾಗಿ ತಲುಪಬೇಕಾಗಿದ್ದ ಡಿಸೇಲ್ ಕಾಳಸಂತೆಯಲ್ಲಿ ಮಾರಾಟವಾಗುವುದಕ್ಕೆ ಕಡಿವಾಣ ಹಾಕಿ ಡಿಸೇಲ್ ಸಬ್ಸಿಡಿಯನ್ನು 1622 ದೋಣಿ ಮಾಲಿಕರ ಖಾತೆಗಳಿಗೆ 254 ಕೋಟಿ ಜಮೆ ಮಾಡಲಾಗಿದೆ. ಕಾರವಾರ ಮತ್ತು ಗೋವಾ ಗಡಿ ಪ್ರದೇಶಗಳಲ್ಲಿ ನಮ್ಮ ಮೀನುಗಾರರು ಮೀನುಗಾರಿಕೆ ನಡೆಸಿ ವಾಪಾಸಾಗುವಾಗ ಅಲ್ಲಿ ದೋಣಿ ತಡೆದು ದರೋಡೆ ನಡೆಸಿ ಹಲ್ಲೆಗೈದು ಕಳುಹಿಸುತ್ತಿದ್ದ ವಿಚಾರವನ್ನು ಖುದ್ದಾಗಿ ಮುತುವರ್ಜಿ ವಹಿಸಿ ಕರಾವಳಿ ಕಾವಲು ಪಡೆ ಮತ್ತು ಪೋಲಿಸ್ ಇಲಾಖೆಯ ಮೂಲಕ ಪರಿಹರಿಸಿ ಮೀನುಗಾರರಿಗಿದ್ದ ಜೀವಬೇದರಿಕೆಯನ್ನು ಪರಿಹರಿಸಿಲಾಗಿದೆ.
ಪ್ರಮುಖ ಸಣ್ಣ ಮೀನು ಮಾರುಕಟ್ಟೆಯನ್ನು ನವೀಕರಿಸಿ ಸುಸಜ್ಜಿತ ಮೀನು ಮಾರುಕಟ್ಟೆಯಾಗಿ ಅಭಿವೃದ್ಧಿ ನಡೆಸಲಾಗಿದೆ, ಅಕ್ರಮ ಮಿನುಗಾರಿಕಾ ದೋಣಿಗಳನ್ನು ಸರಕಾರದ ಕಾನೂನಿನ್ವಯ ಸಕ್ರಮಗೊಳಿಸಿ ಮೀನುಗಾರರ ಬೇಡಿಕೆ ಈಡೇರಿಕೆ ಮಾಡಲಾಗಿದ್ದು, ಹೊಸ ದೋಣಿ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ಮೀನುಗಾರರೆಲ್ಲರಿಗೂ ಸಾಧ್ಯತಾ ಪತ್ರ(ಫಿಸಿಬಿಲಿಟಿ)ವನ್ನು ನೀಡಿ ಮೀನುಗಾರರ ದಶಕದ ಕನಸು ನನಸು ಮಾಡಲಾಗಿದೆ.
ವಸತಿ ರಹಿತ ಮೀನುಗಾರರಿಗೆ ಮತ್ಯ್ಸಾಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ 368 ಕುಟುಂಬಗಳಿಗೆ 3.19ಕೋಟಿ ಅನುದಾನ ಮಂಜೂರ ಮಾಡಲಾಗಿದ್ದು, ಮೀನುಗಾರರಿಗೆ ರಾಷ್ಟ್ರೀಕ್ರತ ಬ್ಯಾಂಕ್ ಗಳಲ್ಲಿ 2% ಬಡ್ಡಿ ದರದಲ್ಲಿ ಸಾಲ, 29789 ಫಲಾನುಭವಿಗಳಿಗೆ ಸಾಲದ ಮೇಲಿನ ವ್ಯತ್ಯಾಸದ ಬಡ್ಡಿ ಮೊತ್ತ 16ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಮುದ್ರ ಮೀನುಗಾರಿಕೆ ನಡೆಸುವಾಗ ಮ್ರತಪಟ್ಟ ಮೀನುಗಾರರ ಕುಟುಂಬಗಳಿಗೆ ನೀಡುವ ಸಂಕಷ್ಟ ಪರಿಹಾರದ ಮೊತ್ತವನ್ನು 1ಲಕ್ಷ ರೂ ಗಳಿಂದ 6ಲಕ್ಷ ರೂ ಗೆ ಏರಿಕೆ ಮಾಡಿ 34 ಮೀನುಗಾರರ ಕುಟುಂಬಗಳ ಅವಲಂಭಿತರಿಗೆ 1.05ಕೋಟಿ ಸಂಕಷ್ಟ ಪರಿಹಾರ ಧನ ಹಸ್ತಾಂತರ ಮಾಡಲಾಗಿದೆ ಎಂದರು.
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ 1.28ಕೋಟಿ ರೂ. ಸಹಾಯಧನ, ಮೀನುಗಾರಿಕಾ ಕೊಂಡಿ ರಸ್ತೆಗಳ ಅಭಿವೃದ್ಧಿಗೆ 4.88ಕೋಟಿ ರೂ. ಅನುದಾನ,ಮೀನುಗಾರರ ಸುಗಮ ಸಂಚಾರಕ್ಕೆ ಕ್ರಮ, ಮಲ್ಪೆ ಬಾಪುತೋಟ ಮೀನುಗಾರಿಕಾ ಬಂದರಿನ 3ನೇ ಹಂತದ ಅಭಿವೃದ್ಧಿ, 700ಕ್ಕೂ ಹೆಚ್ಚು ದೋಣಿಗಳ ನಿಲುಗಡೆಗೆ ಕ್ರಮ,ಸಿ.ಎಸ್.ಆರ್ ಅನುದಾನದಡಿ ಮಲ್ಪೆಯಲ್ಲಿ ಯಾಂತ್ರಿಕ ದೋಣಿಗಳ ದುರಸ್ಥಿಗೆ ಯಾಂತ್ರಿಕ ಸ್ಲಿಪ್ ವೇ ನಿರ್ಮಾಣ, ಟ್ರಾಲ್ ಬೋಟ್ ಗಳ ತಂಗುದಾಣಕ್ಕಾಗಿ ಮಲ್ಪೆ ಬಾಪುತೋಟ ಸಮೀಪ 2.40ಕೋಟಿ ರೂ. ಜಟ್ಟಿ ನಿರ್ಮಿಸಿ ಮೀನುಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ.
ಸುಮಾರು 1000 ಹೊಸ ದೋಣಿಗಳು ನಿರ್ಮಾಣ ಹಂತದಲ್ಲಿದ್ದು ತಂಗುದಾಣದ ಅವಶ್ಯಕತೆಗನುಗುಣವಾಗಿ ಜಟ್ಟಿ ವಿಸ್ತರಣೆ ಕಾಮಗಾರಿಯ 11.30ಕೋಟಿ ರೂ. ಗಳ ಪ್ರಸ್ತಾವನೆಯನ್ನು ಪೂರ್ಣಗೊಳಿಸಲಾಗಿದೆ. ಮಲ್ಪೆ, ಪಡುಕೆರೆ, ಕೊಳ, ವಡಬಾಂಡೇಶ್ವರ, ಹೂಡೆ, ತೊಟ್ಟಂ, ಕುತ್ಪಾಡಿ ಪಡುಕೆರೆ, ಕಿದಿಯೂರು ಪಡುಕೆರೆ ವ್ಯಾಪ್ತಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮುದ್ರ ಕೊರೆತ ತಡೆಗೊಡೆ ಕಾಮಗಾರಿಗೆ 19.30 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಸಲಾಗಿದೆ,ಈ ಮೂಲಕ ಸಂಪರ್ಕ ರಸ್ತೆ, ಭೂಮಿ,ಮನೆ,ಆಸ್ತಿ-ಪಾಸ್ತಿ ಹಾಗೂ ಜೀವಹಾನಿಯಾಗದಂತೆ ಕ್ರಮವಹಿಸಲಾಗಿದೆ.
ಕೋಡಿಬೆಂಗ್ರೆ ಕಡಲ ತೀರದಲ್ಲಿ ಕಡಲ ತೀರ ಸಂರಕ್ಷಣೆಗೆ 61ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಗಿಲ್ ನೆಟ್ ದೋಣಿ ಖರೀದಿಗೆ ಸಹಾಯಧನ, ಮೀನುಹಿಡಿಯುವ ಸಲಕರಣೆಗಳು ಮತ್ತು ರಕ್ಷಣಾ ಸಲಕರಣೆಗಳ ಕಿಟ್ ಗಳನ್ನು ಮೀನುಗಾರಿಕಾ ಇಲಾಖೆಯ ವತಿಯಿಂದ ಉಚಿತವಾಗಿ ವಿತರಿಸಲಾಗಿದೆ ಎಂದರು.