Home Mangalorean News Kannada News ಬೈಂದೂರು ಕ್ಷೇತ್ರದಲ್ಲಿ 50.92 ಕೋಟಿ ಕಾಮಗಾರಿಗೆ ಅನುದಾನ ಮಂಜೂರು : ಶಾಸಕ ಕೆ.ಗೋಪಾಲ ಪೂಜಾರಿ

ಬೈಂದೂರು ಕ್ಷೇತ್ರದಲ್ಲಿ 50.92 ಕೋಟಿ ಕಾಮಗಾರಿಗೆ ಅನುದಾನ ಮಂಜೂರು : ಶಾಸಕ ಕೆ.ಗೋಪಾಲ ಪೂಜಾರಿ

Spread the love

ಬೈಂದೂರು ಕ್ಷೇತ್ರದಲ್ಲಿ 50.92 ಕೋಟಿ ಕಾಮಗಾರಿಗೆ ಅನುದಾನ ಮಂಜೂರು : ಶಾಸಕ ಗೋಪಾಲ ಪೂಜಾರಿ

ಬೈಂದೂರು : ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 40.92 ಕೋಟಿ ಮತ್ತು ಗ್ರಾಮೀಣ ರಸ್ತೆ ಕಾಮಗಾರಿಗೆ 10 ಕೋಟಿ ಸೇರಿದಂತೆ ಒಟ್ಟು 50.92 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸದ್ಯದಲ್ಲೇ ಗುದ್ದಲಿ ಪೂಜೆ ನಡೆಯಲಿದೆ ಎಂದು ಬೈಂದೂರು ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.

ಅವರು ಬೈಂದೂರು ಶಾಸಕರ ಕಛೇರಿಯಲ್ಲಿ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿಗಳು ಹಾಗೂ ಆಸ್ಕರ್ ಫೆರ್ನಾಂಡಿಸ್ ಅನುದಾನದಡಿಯಲ್ಲಿ 10 ಕೋಟಿ ಅನುದಾನ ದೊರೆತಿದೆ. ಕರಾವಳಿ ಭಾಗದ ರಸ್ತೆಗೆ ಸಂಪೂರ್ಣ ಡಾಂಬರೀಕರಣಗೊಳಿಸಲಾಗುವುದು. ಕ್ಷೇತ್ರದ ಅಭಿವೃದ್ದಿಯನ್ನು ಸಹಿಸದೇ ಅಪಪ್ರಚಾರ ಮಾಡುವ ವಿರೋಧ ಪಕ್ಷದವರಿಗೆ ಅಭಿವೃದ್ಧಿಯ ಮೂಲಕ  ಉತ್ತರ ನೀಡಿದ್ದೇನೆ. ಬೈಂದೂರಿನಲ್ಲಿ ಈಗಾಗಲೇ ಅಗ್ನಿಶಾಮಕ ದಳದ ಕಛೇರಿ ಹಾಗೂ ಕೆ.ಎಸ್.ಆರ್.ಟಿ.ಸಿ ಡಿಪೋ ಸ್ಥಾಪನೆಯ ರೂಪುರೇಷಗಳು ಪ್ರಗತಿಯಲ್ಲಿದೆ. ಬೈಂದೂರಿನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದರು.

ಸುಳ್ಳು ಪ್ರಚಾರವನ್ನು ಮಾಡಿಕೊಳ್ಳಬಾರದು : ಅಭಿವೃದ್ದಿಯ ಹೆಸರಿನಲ್ಲಿ ಜನರಿಗೆ ಸುಳ್ಳು ಭರವಸೆಯನ್ನು ನೀಡಿ ಪ್ರಚಾರ ಮಾಡಿಕೊಳ್ಳಬಾರದು. ಜನರಿಗೆ ಹೇಳಿದ ಕೆಲಸವನ್ನು ಮಾಡಿ ತೋರಿಸುವ ಧೈರ್ಯಬೇಕು. ಈ ಭಾಗದ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ಒಂದು ಅಭಿವೃದ್ದಿಯ ಕೆಲಸವನ್ನು ಮಾಡಿಲ್ಲ. ಜನ ಸಾಮಾನ್ಯರಿಗೆ ಮೋಸ ಮಾಡುವ ಕಾರ್ಯವನ್ನು ಕಾಂಗ್ರೆಸ್ ಪಕ್ಷದವರು ಮಾಡಿಲ್ಲ. ನಾವು ಜನರ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದರು.

ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಮುಖಂಡರು ಸೇರುವುದಿಲ್ಲ : ಬಿ.ಜೆ.ಪಿಯಲ್ಲಿ ಶಾಸಕ ಸ್ಥಾನಕ್ಕೆ ಅಭ್ಯರ್ಥಿ ಕೊರತೆ ಇದ್ದು ಕಾಂಗ್ರೆಸ್ ಶಾಸಕರ ಮನೆಬಾಗಿಲಿಗೆ ಎಡತಾಡುತ್ತಿದ್ದಾರೆ ಎಂದು ಅಪಹಾಸ್ಯ. ಕರಾವಳಿಯಿಂದ ಯಾವ ಕಾಂಗ್ರೆಸ್ ಶಾಸಕರು ಬಿಜೆಪಿ ಕಡೆ ಮುಖ ಮಾಡಿಲ್ಲ. ಬಿಜೆಪಿ ಹೊಲಸು ರಾಜಕೀಯ ಮಾಡುತ್ತಿದೆ. ಕೊಡೇರಿ ರಸ್ತೆಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಬಿಜೆಪಿ ಜನರಿಂದ ಚಂದಾ ಎತ್ತಿ ರಿಪೇರಿ ಮಾಡುವ ನಾಟಕ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಆದರ್ಶ ಗ್ರಾಮಕ್ಕೆ ಯಾವುದೇ ಅನುದಾನ ಕೇಂದ್ರ ಸರ್ಕಾರದ ನೀಡದೇ ಇದ್ದರೂ ಆಸ್ಕರ್ ಫೆರ್ನಾಂಡಿಸ್ ಅವರ ಆದರ್ಶ ಗ್ರಾಮ ಯೋಜನೆಯ ಶಿರೂರಿನಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಲವಾರು ಕಾಮಗಾರಿಯಾಗಿದೆ. ಸಂಸದ ಬಿ.ಎಸ್. ಯಡಿಯೂರಪ್ಪನವರು ಕೆರಾಡಿಯಲ್ಲಿ ಏನು ಅಭಿವೃದ್ದಿ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್.ರಾಜು ಪೂಜಾರಿ, ತಾ.ಪಂ ಸದಸ್ಯರಾದ ವಿಜಯ ಕುಮಾರ್ ಶೆಟ್ಟಿ, ಹಕ್ಕಾಡಿ ಜಗದೀಶ್ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಬೈಂದೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪ್ಪುಂದ ಹಾಗೂ ಪಕ್ಷದ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version