ಬೋಟ್ ಅಗ್ನಿ ಅವಘಡ: ನೊಂದ ಮೀನುಗಾರರಿಗೆ ಗರಿಷ್ಠ ಪರಿಹಾರಕ್ಕೆ ಪ್ರಯತ್ನ – ಸಚಿವ ಮಂಕಾಳ ವೈದ್ಯ

Spread the love

ಬೋಟ್ ಅಗ್ನಿ ಅವಘಡ: ನೊಂದ ಮೀನುಗಾರರಿಗೆ ಗರಿಷ್ಠ ಪರಿಹಾರಕ್ಕೆ ಪ್ರಯತ್ನ – ಸಚಿವ ಮಂಕಾಳ ವೈದ್ಯ

ಕುಂದಾಪುರ : ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಫ್ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ರಾಜ್ಯದ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು 8 ಮೀನುಗಾರಿಕೆ ಬೋಟುಗಳು ಹಾಗೂ ಒಂದು ದೋಣಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಘಟನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, ಇಲ್ಲಿಗೆ ಬರುವಾಗ ನನ್ನ ಯೋಚನೆ ಬೇರೆಯೇ ಆಗಿತ್ತು. ಆದರೆ ಇಲ್ಲಿ ನೋಡಿದಾಗ ಬಹಳ ಬೇಸರವಾಗುತ್ತಿದೆ. ಮೀನುಗಾರರ ಕಷ್ಟ ಗೊತ್ತಿದೆ. ಅವರ ಸಂಕಷ್ಟ ಅರಿತಿದ್ದೇನೆ. ಹೀಗಾಗಿ ಘಟನೆ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ನಮ್ಮ ಸರಕಾರದಿಂದ ಏನು ಸಾಧ್ಯವಾಗುತ್ತದೆ ಹಾಗೂ ನೊಂದ ಮೀನುಗಾರರಿಗೆ ಹೆಚ್ಚಿನ ಮೊತ್ತವನ್ನು ಕೊಡುವ ಉದ್ದೇಶದಿಂದ ಸದ್ಯಕ್ಕೆ ಯಾವುದೇ ಘೋಷಣೆ ಮಾಡುವುದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಕುಳಿತು ಮಾತನಾಡಿ, ಇವರಿಗೆ ಸರಕಾರದಿಂದ ಏನು ಕೊಡಲು ಸಾಧ್ಯವೋ ಅದನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಷ್ಟದ ಪರಿಸ್ಥಿತಿಯಲ್ಲಿ ಮೀನುಗಾರರ ಸಹಾಯ ಸಹಕಾರಕ್ಕೆ ಇಲಾಖೆ, ಸರಕಾರ ನಿಲ್ಲುತ್ತದೆ. ಅವರಿಗೆ ಸಮಾಧಾನ ಮಾಡಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಘಟನೆ ಬಗ್ಗೆ ಪೊಲೀಸ್ ಮತ್ತು ಮೀನುಗಾರಿಕೆ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಸಾವಿರಾರು ಕೋಟಿ ಆಸ್ತಿ ಬಂದರು ಪ್ರದೇಶಗಳಲ್ಲಿ ಇರುವುದರಿಂದ ಬಂದರಿನಲ್ಲಿ ಇಲಾಖೆ ಅಥವಾ ವಿಮಾ ಕಂಪೆನಿ ಮೂಲಕ ಪಂಪ್ ಹೌಸ್ ನಿರ್ಮಾಣದ ಯೋಚನೆ ಮಾಡಿ ಕ್ರಮಕೈಗೊಳ್ಳಲಾಗುವುದು. ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆ ನೋಡಿಕೊಳ್ಳಬೇಕಿದೆ. ಪಂಚಾಯತ್ಗೆ ಇದರಲ್ಲಿ ಯಾವುದೇ ಆದಾಯ ಇಲ್ಲ. ಪಂಚಾಯತ್ ವಸೂಲಿ ಮಾಡುತ್ತಿದ್ದರೆ ಅವರೇ ಹೊಣೆಗಾರರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದರು.

ಬಂದರು ಇಲಾಖೆ ಅಧಿಕಾರಿ ಗೌಸ್ ಅಲಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್., ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ಮೀನುಗಾರ ಮುಖಂಡರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love