ಬೋಳಾರದಲ್ಲಿ ಚೂರಿ ಇರಿತ ಪ್ರಕರಣ; ನಾಲ್ವರ ಬಂಧನ
ಮಂಗಳೂರು: ನಗರದ ಬೋಳಾರ್ ಹಾಲ್ ಒಂದರಲ್ಲಿ ನಡೆಸಿದ್ದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಂದಿಗುಡ್ಡೆ ಬಸ್ ತಂಗುದಾಣದ ಬಳಿ ಪಾಂಡೇಶ್ವರ ಪೊಲೀಸರು ಗುರುವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಬಂಧಿತರನ್ನು ಬೋಳಾರದ ಪಾದೆಕಲ್ಲು ನಿವಾಸಿ ಜ್ಞಾನೇಶ್ ನಾಯಕ್ (20), ಹೊಯ್ಗೆ ಬಝಾರ್ ನಿವಾಸಿಗಳಾದ ರಾಹುಲ್ ತಿಂಗಳಾಯ (25), ನಿತೇಶ್ ಯಾನೆ ಪಪ್ಪು (25) ಮತ್ತು ಚರಣ್ (32) ಎಂದು ಗುರುತಿಸಲಾಗಿದೆ.
ದಿನಾಂಕ:06-05-2019 ರಂದು ರಾತ್ರಿ 10-30 ಗಂಟೆಗೆ ಮಹೇಂದ್ರ ಶೆಟ್ಟಿ ಹಾಗೂ ಸುರಾಗ್ ಎಂಬವರಿಗೆ ಆರೋಪಿಗಳಾದ ಜ್ಞಾನೇಶ್ ಹಾಗೂ ಆತನ ಸಹಚರರು ಮಂಗಳೂರು ನಗರದ ಬೋಳಾರ ಆಶೀರ್ವಾದ್ ಹಾಲ್ ನಲ್ಲಿ ಚೂರಿ ಹಾಗೂ ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪ್ರಯತ್ನಿಸಿದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ದಿನಾಂಕ:09-05-2019 ರಂದು ಮದ್ಯಾಹ್ನ 3-15 ಗಂಟೆಗೆ ಮಂಗಳೂರು ನಗರದ ನಂದಿಗುಡ್ಡೆ ಬಸ್ಸು ತಂಗುದಾಣದ ಬಳಿಯಿಂದ ಬಂಧಿಸಿರುತ್ತಾರೆ. ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಚೂರಿ ಹಾಗೂ ಬಾಟಲಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಳೆ ದ್ವೇಷದಿಂದ ಈ ಕೃತ್ಯ ನಡೆಸಿರುವುದೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿರುತ್ತದೆ.
ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐಪಿಎಸ್, ಉಪ ಪೊಲೀಸ್ ಆಯುಕ್ತರು (ಕಾ&ಸು) ರವರಾದ ಹನುಮಂತರಾಯ ಐ.ಪಿ.ಎಸ್ , ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರಾದ ಲಕ್ಷ್ಮಿ ಗಣೇಶ್, ಕೆ.ಎಸ್.ಪಿ.ಎಸ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಹೆಗ್ಡೆ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಕುಮಾರ್ ಆರಾಧ್ಯ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ರಾಜೇಂದ್ರ ಬಿ ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ಆರೋಪಿಗಳ ಪತ್ತೆಗೆ ದಕ್ಷಿಣ ಠಾಣೆಯ ಸಿಬ್ಬಂಧಿಗಳು ಸಹಕರಿಸಿರುತ್ತಾರೆ.