Home Mangalorean News Kannada News ಬೋಳಾರ ನಾರಾಯಣ ಶೆಟ್ಟಿ ಅಭಿಜಾತ ಕಲಾವಿದ : ಅರುವ ಕೊರಗಪ್ಪ ಶೆಟ್ಟಿ ಅಭಿಮತ

ಬೋಳಾರ ನಾರಾಯಣ ಶೆಟ್ಟಿ ಅಭಿಜಾತ ಕಲಾವಿದ : ಅರುವ ಕೊರಗಪ್ಪ ಶೆಟ್ಟಿ ಅಭಿಮತ

Spread the love

ಬೋಳಾರ ನಾರಾಯಣ ಶೆಟ್ಟಿ ಅಭಿಜಾತ ಕಲಾವಿದ : ಅರುವ ಕೊರಗಪ್ಪ ಶೆಟ್ಟಿ ಅಭಿಮತ

ಮಂಗಳೂರು : ನಾಡಿನ ಸುಪ್ರಸಿದ್ದ ಯಕ್ಷಗಾನ ಕಲಾವಿದರಾಗಿದ್ದ ಬೋಳಾರ ನಾರಾಯಣ ಶೆಟ್ಟಿ ಅವರು ಯಕ್ಷರಂಗದಲ್ಲಿ ತನ್ನದೇ ಆದ ಛಾಪು ನಿರ್ಮಾಣ ಮಾಡಿದಂತಹ ಅಭಿಜಾತ ಕಲಾವಿದ , ಅವರ ಜೊತೆಗೆ ವೇಷಧಾರಿಯಾಗಿ ಪಾತ್ರಮಾಡಿದಾಗೆಲ್ಲಾ ಹೊಸ ಅನುಭವವಾಗುತ್ತಿತ್ತು , ಅವರಂತಹ ಮತ್ತೊಬ್ಬ ಅಭಿಜಾತ ಕಲಾವಿದ ಸೃಷ್ಟಿಯಾಗಿಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಅರುವ ಕೊರಗಪ್ಪ ಶೆಟ್ಟಿ ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸೋಮೇಶ್ವರ ಉಚ್ಚಿಲದ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರವು ಹಮ್ಮಿಕೊಂಡ ಹಿರಿಯ ಯಕ್ಷಗಾನ ಕಲಾವಿದ ಬೋಳಾರ ನಾರಾಯಣ ಶೆಟ್ಟಿ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಅರುವ ಕೊರಗಪ್ಪ ಶೆಟ್ಟಿ ಅವರು ಮಾತನಾಡಿದರು.

ಬೋಳಾರ ನಾರಾಯಣ ಶೆಟ್ಟಿ ಅವರೊಂದಿಗೆ ಅನೇಕ ಪ್ರಸಂಗಗಳಲ್ಲಿ ಜೊತೆಯಾಗಿ ವೇಷಧಾರಿಯಾಗಿ ಪಾತ್ರ ಮಾಡಿದ್ದೇನೆ, ಕೋಟಿ ಚೆನ್ನಯ ಪ್ರಸಂಗದಲ್ಲಿ ತನ್ನ ಕೋಟಿ ಪಾತ್ರ ಹಾಗೂ ನಾರಾಯಣ ಶೆಟ್ಟಿ ಅವರ ಚೆನ್ನಯ ಪಾತ್ರ ಬಾರೀ ಜನಪ್ರಿಯತೆ ಪಡೆದಿತ್ತು , ಇಂದಿಗೂ ಆ ದೃಶ್ಯ ತನ್ನ ಕಣ್ಣಮುಂದೆ ಬಂದು ನಿಲ್ಲುತ್ತದೆ , ನಾರಾಯಣ ಶೆಟ್ಟಿ ಅವರು ಇಂದು ನಮ್ಮೊಂದಿಗೆ ಇಲ್ಲವಾಗಿದ್ದರೂ ಅವರು ಕಟ್ಟಿಕೊಟ್ಟ ದೃಶ್ಯಗಳು , ಪಾತ್ರಗಳು ನಮ್ಮ ಮುಂದಿವೆ ಎಂದು ಅರುವ ಕೊರಗಪ್ಪ ಶೆಟ್ಟಿ ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ತುಳು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಮಾತನಾಡಿ , ಬೋಳಾರ ನಾರಾಯಣ ಶೆಟ್ಟಿ ಅವರು ರಂಗಸ್ಥಳ ಪ್ರವೇಶ ಮಾಡುವಂತಹ ಸನ್ನಿವೇಶವೇ ಅತ್ಯಂತ ಧೀಮಂತಿಕೆಯ ದೃಶ್ಯವಾಗಿತ್ತು. ಅವರ ಗಂಭೀರ ನಡಿಗೆ ರಂಗಸ್ಥಳಕ್ಕೆ ವಿಶೇಷವಾದ ಮೆರಗನ್ನು ತಂದುಕೊಡುತ್ತಿತ್ತು ಎಂದು ನೆನಪಿಸಿದರು. ಅಕಾಡೆಮಿಯು ತುಳುನಾಡಿನ ಹಿರಿಯ ಸಾಧಕರ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಎ.ಸಿ.ಭಂಡಾರಿ ಅವರು ಹೇಳಿದರು.

ಸಮಾರಂಭಧಲ್ಲಿ ಸಂಸ್ಮರಣಾ ಭಾಷಣ ಮಾಡಿದ ಹಿರಿಯ ಪ್ರಸಂಗಕರ್ತ ಹಾಗೂ ಭಾಗವತರಾದ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಮಾತನಾಡಿ , ಬೋಳಾರ ನಾರಾಯಣ ಶೆಟ್ಟಿ ಅವರು ನಾಟ್ಯ ಪ್ರಕಾರವನ್ನು ಯಾವುದೇ ತರಬೇತುದಾರರಿಂದ ಕಲಿತವರಲ್ಲ , ಆದರೆ ಅವರ ನಾಟ್ಯ ಮಾತ್ರ ಅತ್ಯಂತ ಪ್ರೌಢಿಮೆಯ ನಾಟ್ಯವಾಗಿತ್ತು, ಮಾತಿನ ಶೈಲಿಯಲ್ಲಿ ಕೂಡ ತನ್ನದೇ ಆದ ವಿಶಿಷ್ಟ ಕ್ರಮವಾಗಿ ಕ್ರೀಯಾಪದದೊಂದಿಗೆ ಮಾತನ್ನು ಆರಂಭಿಸುವ ಶೈಲಿಯನ್ನು ರೂಡಿಸಿಕೊಂಡಿದ್ದರು ಎಂದು ಹೇಳಿದರು.

ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ ಚಂಬಲ್ತಿಮಾರ್ ಅವರು ಯಕ್ಷಗಾನದ ಹಿನ್ನೆಲೆ ಹಾಗೂ ವರ್ತಮಾನ ಮತ್ತು ಭವಿಷ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ನಾರಾಯಾಣ ಶೆಟ್ಟಿ ಅವರ ಪುತ್ರ ಬೋಳಾರ ಕರುಣಾಕರ ಶೆಟ್ಟಿ ಅವರು ಮಾತನಾಡಿ , ತನ್ನ ತಂದೆಯವರು ಯಕ್ಷಗಾನವನ್ನು ತಪಸ್ಸಿನಂತೆ ಮಾಡಿಕೊಂಡು ಬಂದವರು, ಅವರ ಸಾಧನೆ ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಹೇಳಿದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಸ್ತಾವಿಕವಾಗಿ ಮಾತನಾಡಿದರು,ಕಲಾಗಂಗೋತ್ರಿಯ ಅಧ್ಯಕ್ಷ ಯು. ಸತೀಶ್ ಕಾರಂತ ಸ್ವಾಗತಿಸಿದರು, ಕಾರ್ಯದರ್ಶಿ ದಯಾನಂದ ಗಟ್ಟಿ ಪಿಲಿಕೂರು ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯೆ ಶ್ರೀಮತಿ ವಿದ್ಯಾಶ್ರೀ ವಂದಿಸಿದರು. ಸಂಸ್ಮರಣಾ ಕಾರ್ಯಕ್ರಮದ ಬಳಿಕ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ” ಕೋಟಿ ಚೆನ್ನಯ ” ತುಳು ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.


Spread the love

Exit mobile version