ಬ್ಯಾಂಕ್‌ಗೆ 2.7 ಲಕ್ಷ ರೂ. ವಂಚನೆ ದೂರು
ಪಡುಬಿದ್ರಿ: ಉಚ್ಚಿಲದ ಕೋಆಪರೇಟಿವ್ ಬ್ಯಾಂಕೊಂದಕ್ಕೆ ನಕಲಿ ಕೊಟೇಶನ್ ನೀಡಿ 2.70 ಲಕ್ಷ ರೂ. ವಾಹನ ಸಾಲ ಪಡೆದು ವಂಚಿಸಿದ ಪಡುಬಿದ್ರಿ ನಡ್ಸಾಲು ಗ್ರಾಮ ನಿವಾಸಿ ಅಬ್ದುಲ್ ಖಾದರ್ ಮತ್ತು ಜಾಮೀನುದಾರರಾದ ಸುರತ್ಕಲ್‌ನ ಅಬ್ದುಲ್ ಸಲಾಂ ಮತ್ತು ಮಹಮ್ಮದ್ ಸಾದಿಕ್ ಎಂಬುವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಗ್ರಾಹಕನಾಗಿದ್ದ ಅಬ್ದುಲ್ ಖಾದರ್ 2018 ಡಿ.21ರಂದು 3,60,808 ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದನು. ಸಾಲಕ್ಕೆ ಅಬ್ದುಲ್ ಸಲಾಂ ಮತ್ತು ಮಹಮ್ಮದ್ ಸಾದಿಕ್ ಜಾಮೀನು ನೀಡಿದ್ದು, 2.70 ಲಕ್ಷ ರೂ.ಗಳ ಸಾಲದ ಚೆಕ್ ಅನ್ನು ರಾಷ್ಟ್ರೀಕೃತ ಬ್ಯಾಂಕ್‌ನ ಮಂಗಳೂರು ಕುಲಶೇಖರ ಶಾಖೆಯಲ್ಲಿ ಮೋಟರ್ಸ್ ಸಂಸ್ಥೆಯೊಂದರ ಹೆಸರಿನ ಖಾತೆಯಲ್ಲಿ ನಗದೀಕರಣಗೊಳಿಸಿದ್ದರು. ನಂತರ ಫಾರ್ಮ್ 20, ವಾಹನ ಕೀ, ರಶೀದಿ ಮತ್ತು ವಿಮಾ ಪ್ರತಿ ಪಡೆದುಕೊಳ್ಳಲು ಮೋಟರ್ಸ್ ಸಂಸ್ಥೆಗೆ ತೆರಳಿದಾಗ, ಅವರು ನಾವು ಈ ವ್ಯಕ್ತಿಗಳಿಗೆ ಯಾವುದೇ ಕೊಟೇಶನ್ ಕೊಟ್ಟಿಲ್ಲವೆಂದು ಬ್ಯಾಂಕ್‌ನವರಿಗೆ ತಿಳಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ಇದೇ ರೀತಿ ಪಡುಬಿದ್ರಿ ಮತ್ತೊಂದು ಸೊಸೈಟಿಗೂ ವಂಚಿಸಿರುವ ಬಗ್ಗೆ ಜ.3ರಂದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.