ಬ್ಯಾಟರಿ ಕಳವು: ಟ್ರಿಪ್ ನಡೆಸದೆ ಬಾಕಿಯಾದ ಸಿಟಿ ಬಸ್
ಉಳ್ಳಾಲ: ನಿಲ್ಲಿಸಿದ್ದ ಬಸ್ಸಿನ ಎರಡು ಬ್ಯಾಟರಿ ಕಳವು ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಬಗಂಬಿಲದಲ್ಲಿ ಇಂದು ನಸುಕಿನ ಜಾವ ಬೆಳಕಿಗೆ ಬಂದಿದ್ದು, ಕಳ್ಳರ ಕಿತಾಪತಿಯಿಂದ ಬ್ಯಾಟರಿಯಿಲ್ಲದೇ ಬೆಳಿಗ್ಗೆ ಕುಂಪಲದಿಂದ ಕೊಟ್ಟಾರ ಕಡೆಗೆ ಹೋಗಬೇಕಾದ ಬಸ್ ಪ್ರಯಾಣವನ್ನೇ ಮೊಟಕುಗೊಳಿಸಿದೆ.
ನಿನ್ನೆ ರಾತ್ರಿ ಕುಂಪಲದ ಬಗಂಬಿಲದಲ್ಲಿ ನಿಲ್ಲಿಸಿದ್ದ ರೂಟ್ ನಂಬರ್ 44 ಮೂಕಾಂಬಿಕ ಟ್ರಾವೆಲ್ಸ್ ಬಸ್ಸಿನ ಎರಡು ಬ್ಯಾಟರಿ ಹಾಗೂ ವೈರ್ ಗಳನ್ನು ಕಳವು ಮಾಡಲಾಗಿದೆ. ಒಟ್ಟು ರೂ. 40,000 ಮೊತ್ತದ ಬ್ಯಾಟರಿಯನ್ನು ಕಳವು ಮಾಡಲಾಗಿದೆ. ರಾತ್ರಿ ಸುಮಾರು ಒಂದರಿಂದ ನಾಲ್ಕು ಗಂಟೆಯ ವೇಳೆಯಲ್ಲಿ ಕೃತ್ಯ ನಡೆದಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗಕ್ಕೆ ಬೆರಳೆಣಿಕೆಯಷ್ಟೇ ಬಸ್ಸುಗಳಿದ್ದು, ಇಂದು ಬೆಳಗ್ಗಿನ ಜಾವ ಬ್ಯಾಟರಿ ಕಳವಾದ ಬಸ್ಸಿಲ್ಲದೇ ಇದ್ದುದರಿಂದ ಪ್ರಯಾಣಿಕರು ಪರದಾಡುವಂತಾಯಿತು.