Home Mangalorean News Kannada News ಬ್ಯಾರಿ ಅಕಾಡೆಮಿಗೆ ಸರ್ವ ನೆರವು: ಶಾಸಕ ವೇದವ್ಯಾಸ  ಕಾಮತ್

ಬ್ಯಾರಿ ಅಕಾಡೆಮಿಗೆ ಸರ್ವ ನೆರವು: ಶಾಸಕ ವೇದವ್ಯಾಸ  ಕಾಮತ್

Spread the love

ಬ್ಯಾರಿ ಅಕಾಡೆಮಿಗೆ ಸರ್ವ ನೆರವು: ಶಾಸಕ ವೇದವ್ಯಾಸ  ಕಾಮತ್
 

ಮಂಗಳೂರು: ಭಾಷೆ, ಸಂಸ್ಕೃತಿಯ ಪ್ರಗತಿಗೆ ದುಡಿಯುತ್ತಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ನಗರದ ಪುರಭವನದಲ್ಲಿ ಶನಿವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಕಲಾರಂಗದ ಸಹಯೋಗದಲ್ಲಿ ಆಯೋಜಿಸಿದ್ದ ಬ್ಯಾರಿ ಭಾಷೆ ಕಲಾವಿದರ ಸಮಾವೇಶ ಮತ್ತು ಬ್ಯಾರಿ ಒಪ್ಪನೆ- ಕೋಲ್ಕಲಿ ಸ್ಪರ್ಧೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಅಕಾಡೆಮಿಗೆ ಘೋಷಣೆ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಸಹಕಾರ ನೀಡಿದ್ದು, ಮುಂದೆ ಹೆಚ್ಚಿನ ಅನುದಾನ ಕೊಟ್ಟಿದ್ದರು. ಇನ್ನು ಕೂಡಾ ಸರಕಾರದ ಮಟ್ಟದಲ್ಲಿ ನೆರವು ಕೊಡಿಸಲಾಗುವುದು. ಬ್ಯಾರಿ ಭಾಷೆಯ ಜಾನಪದ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ಕೊಡಬೇಕು. ಕಲಾವಿದರನ್ನು ಪ್ರೋತ್ಸಾಹಿಸಬೇಕು. ನಾನು ಕೂಡಾ ಬ್ಯಾರಿ ಭಾಷೆ ಕಲಿಯಲಿದ್ದೇನೆ ಎಂದರು.

ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಕಾರ್ಯಕ್ರಮ ಉದ್ಘಾಟಿಸಿ, ಚಿಕ್ಕಮಗಳೂರಿನಲ್ಲಿ ನಡೆದಿದ್ದ ಬ್ಯಾರಿ ಸಮ್ಮೇಳನ ಹಿನ್ನೆಲೆಯಲ್ಲಿ ಅಕಾಡೆಮಿ ಸ್ಥಾಪನೆಯಾಗಿದೆ. ಕರಂಬಾರ್ ಮೊಹಮ್ಮದ್ ಅವರ ನೇತೃತ್ವದಲ್ಲಿ ಅಕಾಡೆಮಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಬ್ಯಾರಿ – ಕೊಂಕಣಿ- ತುಳು ಭಾಷೆ ಬೇರೆಯಾದರೂ ಪರಸ್ಪರ ಸಂಬಂಧಗಳಿವೆ. ಮೂರೂ ಅಕಾಡೆಮಿಗಳು ಜತೆಯಾಗಿ ಕೆಲಸ ಮಾಡಬೇಕು ಎಂದರು.

ಅಕಾಡೆಮಿ ಅಧ್ಯಕ್ಷ ಕರಂಬಾರು ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಹೈದರ್ ಪರ್ತಿಪ್ಪಾಡಿ, ಅಹ್ಮದ್ ಬಾವ ಬಜಾಲ್, ಸಿ.ಎಂ.ಮುಸ್ತಫಾ, ಇಸ್ಮಾಯಿಲ್ ಮೂಡುಶೆಡ್ಡೆ, ನಟ ಪ್ರಾಣೇಶ್ ಶೆಟ್ಟಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಮೊಹಮ್ಮದ್ ಇಮ್ತಿಯಾಝ್, ಅಕಾಡೆಮಿ ಸದಸ್ಯರಾದ ಹಸನಬ್ಬ ಮೂಡುಬಿದಿರೆ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಆಯಿಶಾ ಯು.ಕೆ., ಮರಿಯಂ ಇಸ್ಮಾಯಿಲ್, ಬಶೀರ್ ಕಿನ್ಯ, ಆರಿಫ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.

ಬ್ಯಾರಿ ಒಪ್ಪನೆ- ಕೋಲ್ಕಲಿ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ‘ಇಂಡತ್ತೊ ರಾಜಾವು ನಾಲೆತ್ತೊ ಫಕೀರ್’ ಎಂಬ ಬ್ಯಾರಿ ಕಥಾ ಪ್ರಸಂಗ, ‘ಅಲ್ಲಾಂಡೊ ಬಿದಿ’ ಎಂಬ ಬ್ಯಾರಿ ನಾಟಕ ಹಾಗೂ ‘ಬ್ಯಾರಿ ನಡತ ಪಂಡ್- ಇಂಡ್’ ಕಾರ್ಯಕ್ರಮಗಳು ನಡೆದವು.

ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ ಬೈಕಂಪಾಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯು.ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ಬಶೀರ್ ಬೈಕಂಪಾಡಿ ವಂದಿಸಿದರು.


Spread the love

Exit mobile version