Home Mangalorean News Kannada News ಬ್ರಹ್ಮಾವರದಲ್ಲಿ ಪ್ರಮೋದ್ ಮಧ್ವರಾಜ್ ಅವರಿಂದ ಭರ್ಜರಿ ರೋಡ್ ಷೋ

ಬ್ರಹ್ಮಾವರದಲ್ಲಿ ಪ್ರಮೋದ್ ಮಧ್ವರಾಜ್ ಅವರಿಂದ ಭರ್ಜರಿ ರೋಡ್ ಷೋ

Spread the love

ಬ್ರಹ್ಮಾವರದಲ್ಲಿ ಪ್ರಮೋದ್ ಮಧ್ವರಾಜ್ ಅವರಿಂದ ಭರ್ಜರಿ ರೋಡ್ ಷೋ

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವಾರಾಜ್ ಸಾವಿರಾರು ಕಾರ್ಯಕರ್ತರ ಜೊತೆ ಸೇರಿ ಮಂಗಳವಾರ ಬ್ರಹ್ಮಾವರ ಪೇಟೆಯಲ್ಲಿ ಭರ್ಜರಿ ರೋಡ್ ಷೋ ನಡೆಸಿದರು.

ಬ್ರಹ್ಮಾವರ ಪೇಟೆಯಾದ್ಯಂತ ಸಾಗಿದ ರೋಡ್ ಷೋ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರಮೋದ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಪರ ಘೋಷಣೆ ಮೊಳಗಿಸಿದರು.

ಬ್ರಹ್ಮಾವರ ಸಿಟಿ ಸೆಂಟರ್ ಬಳಿಯಿಂದ ಆರಂಭಗೊಂಡ ರೋಡ್ ಷೋ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ, ಹಳೆ ಬಸ್ ನಿಲ್ದಾಣ, ತಾಲೂಕು ಕಚೇರಿ, ಸಂತೆ ಮಾರ್ಕೆಟ್, ಬಾರ್ಕೂರು ದ್ವಾರದ, ಬೈಪಾಸ್ ರಸ್ತೆಯ ಮೂಲಕ ಬಸ್ ನಿಲ್ದಾಣದ ಬಳಿ ಅಂತ್ಯಗೊಂಡಿತು.

ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು ‘ಕಳೆದ ಐದು ವರ್ಷ ನಾನು ಮಾಡಿದ ಸೇವೆ ಹಾಗೂ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ನೋಡಿ ಜನರು ಮತ್ತೊಮ್ಮೆ ಗೆಲ್ಲಿಸುವ ವಿಶ್ವಾಸ ಇದೆ. ‘ಮತ್ತೊಂದು ಅವಕಾಶ ನೀಡಿದರೆ ಮತ್ತೆ ಐದು ವರ್ಷಗಳ ಕಾಲ ನಿರಂತರವಾಗಿ ನಿಮ್ಮ ಸೇವೆ ಮಾಡುತ್ತೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ನಾನು ಹೇಳುವುದಿಲ್ಲ. ಆದರೆ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇನೆ ಎಂದು ಧೈರ್ಯದಿಂದ ಹೇಳುತ್ತೇನೆ. ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಬಳಿ ಬೇಡಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ’ ಎಂದು ಅವರು ಹೇಳಿದರು.

‘ಬಡವರಿಗೆ ವಸತಿ ನೀಡಿ ಮನೆ ನಿರ್ಮಿಸಿಕೊಡುವ ಕೆಲಸವನ್ನು ಮಾಡಲು ಬದ್ಧವಾಗಿದ್ದೇನೆ. ಪರಿಭಾವಿತ ಅರಣ್ಯ ಸಮಸ್ಯೆಯನ್ನು ಬಗೆಹರಿಸಿ 94ಸಿ, 94ಸಿಸಿ ಅನ್ವಯ ಎಲ್ಲರಿಗೂ ಹಕ್ಕು ಪತ್ರಗಳನ್ನು ಎಲ್ಲರಿಗೂ ಕೊಡಿಸುತ್ತೇನೆ. ಉಡುಪಿ ನಗರದ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ನೀಡಲು ₹270 ಕೋಟಿ ಮೊತ್ತದ ವಾರಾಹಿ ಯೋಜನೆಯನ್ನು ಈಗಾಗಲೇ ಆರಂಭಿಸಲಾಗಿದ್ದು, ಅದನ್ನು ಪೂರ್ಣಗೊಳಿಸಲಾಗುವುದು. ಚಾಂತಾರು ಮತ್ತು ತೆಂಕನಿಡಿಯೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸಿ ಬ್ರಾಹ್ಮಾವರದ ಭಾಗದ ನೀರಿನ ಸಮಸ್ಯೆ ಸಹ ಬಗೆಹರಿ ಸಲಾಗುವುದು’ ಎಂದು ಭರವಸೆ ನೀಡಿದರು.

‘ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 213 ಬೂತ್‌ಗಳಿವೆ. ಇನ್ನೊಂದು ಅವಕಾಶ ನೀಡಿದರೆ. ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಪ್ರತಿ ಬೂತ್‌ಗೆ ಕರೆದುಕೊಂಡು ಬಂದು ಜನ ಸಂಪರ್ಕ ಸಭೆ ನಡೆಸಲಾಗುವುದು. ಇನ್ನಷ್ಟು ಪ್ರಾಮಾಣಿಕತೆಯಿಂದ ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಸ್ಥಳೀಯ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸಿದ್ದರು.


Spread the love

Exit mobile version