ಬ್ರಹ್ಮಾವರ: ಬೀಗ ಹಾಕಿದ್ದ ಮನೆಯಿಂದ ನಗದು, ಚಿನ್ನಾಭರಣ ಕಳವು
ಬ್ರಹ್ಮಾವರ : ಮನೆಯವರೆಲ್ಲಾ ವಿದೇಶದಲ್ಲಿದ್ದ ವೇಳೆ ಕಳ್ಳರು ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬ್ರಹ್ಮಾವರ ತೆಂಕುಬಿರ್ತಿ ಬಳಿ ಮಹಮ್ಮದ್ ಆಸಿಫ್ ಅಮೀರ್ ಸಾಹೇಬ್ ಎಂಬವರು 8 ತಿಂಗಳ ಹಿಂದೆ ಹೊಸ ಮನೆಯನ್ನು ಕಟ್ಟಿದ್ದು, ಅವರು ಸಂಸಾರ ಸಮೇತ ಮಸ್ಕತ್ನಲ್ಲಿದ್ದು ಮನೆಯನ್ನು ನೋಡಿಕೊಳ್ಳಲು ಮಹಮ್ಮದ್ ಆಸಿಫ್ ಅಮೀರ್ ಸಾಹೇಬ್ ಮನೆಯ ಕೀ ಯನ್ನು ಅವರ ಸಂಬಂಧಿಕರಾದ ಝಿಯಾದ್ ಪಿ ಅವರಿಗೆ ನೀಡಿರುತ್ತಾರೆ. ಮನೆಯ ತೋಟಕ್ಕೆ ನೀರು ಹಾಕಲು ಹೆರೂರು ನಿವಾಸಿ ನವೀನ್ ಅವರಿಗೆ ನೇಮಿಸಿದ್ದು ಅವರಿಗೆ ಗೇಟಿನ ಕೀ ನೀಡಿರುತ್ತಾರೆ. ಅದರಂತೆ ಫೆಬ್ರವರಿ 5ರಂದು ಮಧ್ಯಾಹ್ನ 1 ಗಂಟೆಗೆ ನವೀನ್ ತೋಟಕ್ಕೆ ನೀರು ಬಿಟ್ಟು ವಾಪಾಸು ಹೋಗಿದ್ದು, ಫೆಬ್ರವರಿ 6ರಂದು ಮತ್ತೆ ನವೀನ್ ಬಂದಾಗ ಮಹಮ್ಮದ್ ಆಸಿಫ್ ರವರ ಮನೆಯ ಗೇಟಿನ ಹೊರಗಿನಿಂದ ನೋಡುವಾಗ ಮನೆಯ ಬಾಗಿಲು ತೆರೆದುಕೊಂಡಂತೆ ಕಂಡುಬಂದಿದ್ದು ಝಿಯಾದ್ ಪಿ ಅವರಿಗೆ ಮಾಹಿತಿ ನೀಡಿರುತ್ತಾರೆ.
ಅದರಂತೆ ಝಿಯಾದ್ ಪಿ ಬಂದು ನೋಡಿದಾಗ ಮನೆಯ ಎದುರಿನ ಗೇಟಿನ ಬೀಗ ಹಾಕಿದ ಸ್ಧಿತಿಯಲ್ಲಿದ್ದು ಮನೆಯ ಎದುರಿನ ಬಾಗಿಲು ತೆರೆದು ಕೊಂಡಂತೆ ಕಂಡು ಬಂದಿದ್ದು ಒಳಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಬಾಗಿಲು ಹೊಡೆದು ಮನೆಯ ಒಳಗಿನ ಸ್ವತ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಎರಡು ಬೆಡ್ ರೂಂ ಹಾಗೂ ಮೇಲಿನ ಎರಡು ಬೆಡ್ ರೂಂಗಳ ಬಾಗಿಲು ಕಪಾಟುಗಳ ಲಾಕರ್ಗಳನ್ನು ತೆಗೆದುಕೊಂಡಿದ್ದು ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ.
ಕಳ್ಳರು ಮನೆಯ ಲಾಕರ್ ನಿಂದ ಸುಮಾರು ರೂ 1 ಲಕ್ಷ ನಗದು, ಹಾಗೂ ಎರಡು ಚಿನ್ನದ ಬಳೆಗಳು, ನಾಲ್ಕು ಚಿನ್ನದ ಉಂಗುರ, ಒಂದು ಬ್ರಾಸ್ಲೈಟ್ ಸೇರಿ ಸುಮಾರು 8 ಪವನ್ ಚಿನ್ನಾಭರಣ ಕದ್ದುಕೊಂಡು ಹೋಗಿದ್ದು ಅಂದಾಜು ಮೌಲ್ಯ 1,20,000 ರೂ ಕಳವು ಆಗಿರುವುದಾಗಿ ದೂರಿನಲ್ಲಿ ಝಿಯಾದ್ ಪಿ ತಿಳಿಸಿರುತ್ತಾರೆ.
ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ, ಠಾಣಾಧಿಕಾರಿ ರಾಘವೇಂದ್ರ, ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.