ಬ್ರಹ್ಮಾವರ: ಮರಳು ಲಾರಿಗಳ ಬೇಕಾಬಿಟ್ಟಿ ಸಂಚಾರಕ್ಕೆ ಶಾಲಾ ಬಸ್ಸಿಗೆ ಕಾಯುತ್ತಿದ್ದ ತಾಯಿ ಮಕ್ಕಳ ಪವಾಡ ಸದೃಶವಾಗಿ ಪಾರಾದ ಘಟನೆ ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66 ರ ಆಕಾಶವಾಣಿ ಪೆಟ್ರೋಲ್ ಬಂಕಿನ ಬಳಿ ನಡೆದಿದೆ.
ಶಿವಮೊಗ್ಗ ನೋಂದಣಿಯ (ಕೆಎ 14 ಬಿ 3222) ಮರಳು ಟಿಪ್ಪರ್ ಚಾಲಕ ಅತಿವೇಗ ಹಾಗೂ ಅಜಾಗರುತೆಯಿಂದ ಟಿಪ್ಪರ್ನ್ನು ಬ್ರಹ್ಮಾವರ ಆಕಾಶವಾಣಿ ಬಳಿ ಎಡ ಬದಿಯ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯದ ಡಿವೈಡರನ್ನು ಹಾರಿ ಬಲ ಬದಿಯ ರಸ್ತೆಯನ್ನು ದಾಟಿ ಪಕ್ಕದ ಸರ್ವಿಸ್ ರೋಡಿಗೆ ಹಾರಿ ಹೊಸದಾಗಿ ಕಟ್ಟಿದ ಚರಂಡಿಗೆ ಡಿಕ್ಕಿ ಹೊಡೆದು ನಿಂತಿದೆ. ಲಾರಿ ಚಲಾಯಿಸಿಕೊಂಡು ಬಂದ ದಾರಿಯ ಪಕ್ಕದಲ್ಲೇ ಲಿಟಲ್ರಾಕ್ ಶಾಲೆಗೆಂದು ತೆರಳುತ್ತಿದ್ದ ಶಾಲೆಯ ಮಕ್ಕಳು ತಮ್ಮ ತಾಯಿಯೊಂದಿಗೆ ಬಸ್ಸಿಗೆ ಕಾಯುತ್ತಿದ್ದು, ಲಾರಿ ಬರುತ್ತಿದ್ದನ್ನು ಕಂಡು ಮಕ್ಕಳನ್ನು ಎಳೆದುಕೊಂಡು ಪಕ್ಕಕ್ಕೆ ಒಡಿದ್ದರ ಪರಿಣಾಮ ಉಂಟಾಗಲಿದ್ದ ದೊಡ್ಡ ಅನಾಹುತದಿಂದ ತಪ್ಪಿದಂತಾಗಿದೆ.
ಇದೇ ವೇಳೆ ಉಡುಪಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮ್ಯಾಂಗಲೋರಿಯನ್ ಪ್ರತಿನಿಧಿ ಹಾಗೂ ಇನ್ನೊಂದು ಕಾರಿನ ಚಾಲಕರು ಕೇವಲ 5 ಮೀಟರ್ ಅಂತರದಲ್ಲಿ ಮರಳು ಲಾರಿಯ ಅವಾಂತರದಿಂದ ಪಾರಾಗಿದ್ದಾರೆ. ಕೇವಲ 2 ನಿಮಿಷದ ಅಂತರದಲ್ಲಿ ಘಟನೆ ನಡೆದಿದ್ದು ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ಸಂಭವಿಸಲಿದ್ದ ದೊಡ್ಡ ದುರಂತ ಸಣ್ಣದರಲ್ಲೆ ತಪ್ಪಿಹೋಗಿದೆ.
ಅವ್ಯಾಹತ ಮರಳು ಮಾಫಿಯಾಕ್ಕೆ ಜನ ಕಂಗಾಲು: ಮಾಬುಕಳ ಬಸ್ ಸ್ಟ್ಯಾಂಡ್ನಿಂದ ಹಿಡಿದು ಹೇರೂರು ಸುಪ್ರಿಂ ಫೀಡ್ಸ್ ತನಕ ಸುಮಾರು ಇನ್ನೂರಕ್ಕೂ ಅಧಿಕ ಹೊರ ಜಿಲ್ಲೆಗಳ ಲಾರಿಗಳು ಸಾಲುಗಟ್ಟಿ ನಿಲ್ಲುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ನಡೆದಾಡಲು ಕೂಡ ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಪ್ರಶ್ನೆ ಮಾಡಿದ್ದಲ್ಲಿ ಲಾರಿ ಚಾಲಕರು ಸಾರ್ವಜನಿಕರ ಮೈಮೇಲೆ ಬರುತ್ತಿದ್ದು ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ದೂರುತ್ತಿದ್ದಾರೆ.