ಬ್ರಹ್ಮಾವರ: ಶಾಲೆಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳು ಮಾತ್ರವಲ್ಲದೆ ವ್ಯಕ್ತಿತ್ವವನ್ನು ರೂಪಿಸುವ ಮನೆಯೂ ಕೂಡ ಆಗಿದೆ ಎಂದು ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೋಸ್ || ಹೇಳಿದರು.
ಅವರು ಶುಕ್ರವಾರ ತಮ್ಮ ಬ್ರಹ್ಮಾವರದ ಸೈಂಟ್ ಮೇರಿಸ್ ಓರ್ಥೊಡೊಕ್ಸ್ ಸಿರಿಯನ್ ಕೆಥೆಡ್ರಲ್ ಬ್ರಹ್ಮಾವರ ಹಾಗೂ ಇದರ ಸಹ ಇಗರ್ಜಿಗಳ ಪ್ರಥಮ ಭೇಟಿಯ ಸಾರ್ವಜನಿಕ ಸಭೆ ಹಾಗೂ ಇಗರ್ಜಿಯ ಕೊಸ್ಮೋಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ಇದರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕದ ಶಿಕ್ಷಣದ ಜೊತೆಗೆ ಕೌಶಲ್ಯಯುಕ್ತ ಶಿಕ್ಷಣವನ್ನು ನೀಡುವುದರಿಂದ ಸಾಮಾಜಿಕ ಅಭಿವೃಧ್ಧಿಯಾಗಲು ಸಾಧ್ಯವಿದೆ. ಇಂದಿನ ಮಕ್ಕಳು ಉತ್ತಮ ಕೌಶಲ್ಯಗಳನ್ನು ಶಿಕ್ಷಣದಲ್ಲಿ ಪಡೆಯುವುದರಿಂದ ಮಕ್ಕಳು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಾಧ್ಯವಿದೆ. ಇಂತಹ ಶಿಕ್ಷಣ ನೀಡುವಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದರು.
ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ಸರಕಾರ ನೀಡುತ್ತಿರುವ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು ದೇಶಕ್ಕೆ ಉತ್ತಮ ಯುವ ನಾಗರಿಕರನ್ನು ನೀಡುವ ಉನ್ನತವಾದ ಜವಾಬ್ದಾರಿಯಿದೆ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ದೇಶವಾಗಿದ್ದು ವಿವಿಧ ಭಾಷೆಗಳು ಮತ್ತು ಧರ್ಮಗಳು ಜೊತೆಯಾಗಿ ಬಾಳಿ ಬದುಕುವ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಇದನ್ನು ನಮ್ಮ ಮುಂದಿನ ಜನಾಂಗಕ್ಕೂ ಮುಂದುವರೆಸುವ ಅಗತ್ಯತೆ ಇದೆ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಪ್ರೀತಿ ಕರುಣೆ ನಿಮ್ಮ ಶತ್ರುವನ್ನು ಕೂಡ ಪ್ರೀತಿಸು ಎಂಬ ಧ್ಯೇಯದೊಂದಿಗೆ ಶಿಕ್ಷಣದೊಂದಿಗೆ ಉತ್ತಮ ಸಮಾಜವನ್ನು ರೂಪಿಸುತ್ತಿರುವ ಕ್ರೈಸ್ತ ಸಮುದಾಯದ ಸೇವೆ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ ದೇಶದಲ್ಲಿ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಕ್ರೈಸ್ತ ಸಮುದಾಯ ಶೈಕ್ಷಣಿಕ ಕ್ಷೇತ್ರದ ಮೂಲಕ ದೇಶಕ್ಕೆ ನೀಡದ ಕೊಡುಗೆ ಅಪಾರ. ಒಂದು ದೇಶದ ಅಭಿವೃದ್ಧಿಯ ಮೂಲ ಶಿಕ್ಷಣವಾಗಿದ್ದು ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ದೇಶಕ್ಕೆ ನೀಡುವ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಪ್ರಯತ್ನ ಪಡಬೇಕು ಎಂದರು.
ಬ್ರಹ್ಮಾವರ ಧರ್ಮಪ್ರಾಂತ್ಯ ಇದರ ಮೆಟ್ರೊಪೊಲಿಟನ್ ವಂ ಯಾಕೂಬ್ ಮಾರ್ ಇಲಿಯಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಎಸ್‍ಐ ವಲಯ ಪ್ರತಿನಿಧಿ ವಂ ಜೀವನ್ ಸರ್ವೊತ್ತಮ, ಕಲ್ಕತ್ತಾ ಧರ್ಮಪ್ರಾಂತ್ಯದ ಮೆಟ್ರೊ ಪಾಲಿಟನ್ ವಂ ಡಾ ಜೋಸೆಫ್ ಮಾರ್ ದಿಯೊನಿಯಸ್, ವಂ ಡಾ ಜೋನ್ ಆಬ್ರಾಹಾಂ ಕೊನಟ್ಟು, ಎಮ್ ಜಿ ಜಾರ್ಜ್ ಮುತ್ತೊಟ್, ಡಾ ಜಾಜ್ ಜೊಸೇಪ್, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಇದರ ಅಧ್ಯಕ್ಷರಾದ ವೆರೋನಿಕಾ ಕರ್ನೆಲಿಯೊ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ಕ್ಯಾಥೆಡ್ರಲ್‍ನ ಟ್ರಸ್ಟಿ ಅನಿಲ್ ರಾಡ್ರಿಗಸ್, ಓರ್ಥೋಡಕ್ಸ್ ಸೀರಿಯನ್ ಶಿಕ್ಷಣ ಸಂಸ್ಥೆಗಳ ಜೋನ್ಸನ್ ಕ್ರಾಸ್ತಾ , ವಂ ಲೋರೆನ್ಸ್ ಡೇವಿಡ್ ಕ್ರಾಸ್ತಾ, ವಂ ಲೋರೆನ್ಸ್ ಡಿ’ಸೋಜಾ, ವಂ. ನೊಯೆಲ್ ಲೂವಿಸ್ ಉಪಸ್ಥಿತರಿದ್ದರು.
ಸೈಂಟ್ ಮೇರಿಸ್ ಸೀರಿಯನ್ ಕ್ಯಾಥೆಡ್ರಲ್ ವಿಕಾರ್ ಜನರಲ್ ವಂ ಸಿ ಎ ಐಸಾಕ್ ಸ್ವಾಗತಿಸಿ ಕಾರ್ಯಕ್ರಮದ ಸಂಚಾಲಕ ವಂ ಅಬ್ರಾಹಾಂ ಕುರಿಯಾಕೋಸ್ ವಂದಿಸಿದರು. ಜೀವನ್ ರೋಡ್ರಿಗಸ್ ಮತ್ತು ಅನಿಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.