ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸದಸ್ಯರ ಆಗ್ರಹ
ಉಡುಪಿ: ಉಭಯ ಜಿಲ್ಲೆಯ ರೈತರ ಜೀವಾಳವಾದ ಬ್ರಹ್ಮಾವರದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಯು ಸ್ಥಗಿತಗೊಂಡಿರುವುದರಿಂದ ರೈತರು ಜೀವನ ನಿರ್ವಹಣೆಗೆ ತೊಂದರೆ ಪಡುವುದರೊಂದಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವಲ್ಲಿ ಕಷ್ಟವನ್ನೆದುರಿಸುವಂತಾಗಿದೆ. ವಾರಾಹಿ ನೀರಾವರಿಯಿಂದ ಈಗಾಗಲೇ ರೈತರ ಕೃಷಿ ಜಮೀನಿಗೆ ಕಾಲುವೆ ಮೂಲಕ ನೀರು ಹರಿದು ಬರುತ್ತಿರುವುದರಿಂದ ರೈತರು ಲಾಭದಾಯಕ ಬೆಳೆಯಾದ ಕಬ್ಬು ಬೆಳೆಯಲು ಆಸಕ್ತರಾಗಿದ್ದು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಕಾರ್ಖಾನೆಯ ಸದಸ್ಯರು ಶುಕ್ರವಾರ, ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಆಗ್ರಹಿಸಿದರು.
ರೈತರ ಆಶಾಕಿರಣವಾದ ಈ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಈ ಹಿಂದಿನ ವಾರ್ಷಿಕ ಮಹಾ ಸಭೆಗಳಲ್ಲಿ ಹಲವು ಬಾರಿ ಆಗ್ರಹಿಸುತ್ತಾ ಬಂದಿದ್ದರೂ, ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ವಿಳಂಬವಾಗುತ್ತಿರುವ ಬಗ್ಗೆ ಅಸಮಧಾನವನ್ನು ವ್ಯಕ್ತಪಡಿಸಿದ ಕಾರ್ಖಾನೆಯ ಸದಸ್ಯರು, ಜಮೀನಿನಲ್ಲಿ ಭಾಗಶಃ ಜಮೀನನ್ನು ಮಾರಾಟ ಮಾಡುವ ಮೂಲಕ ಅಥವಾ ಬೇರೆ ಯಾವುದೇ ಮೂಲದಿಂದ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಿ ವಿಳಂಬ ಮಾಡದೇ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿದರು.
ಕಾರ್ಖಾನೆಯ ಸದಸ್ಯರುಗಳ ಅಭಿಪ್ರಾಯಕ್ಕೆ ಅಧ್ಯಕ್ಷ ಹೆಚ್.ಜಯಶೀಲ ಶೆಟಿ ಉತ್ತರಿಸಿ, ಸ್ಥಗಿತಗೊಂಡ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ರೈತ ಮುಖಂಡರುಗಳು, ಆಡಳಿತ ಮಂಡಳಿಯವರು ಹಾಗೂ ಉಸ್ತುವಾರಿ ಸಚಿವರುಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಹಿಂದೆ ಹಲವು ಭಾರಿ ಸಭೆ ನಡೆದಿದ್ದು, ಸರ್ಕಾರದಿಂದ ಆರ್ಥಿಕ ನೆರವು ಪಡೆದುಕೊಂಡು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದೆಂದು ತೀರ್ಮಾನಿಸಲಾಗಿರುತ್ತದೆ.
ಕಾರ್ಖಾನೆಯ ಪುನಶ್ಚೇತನಕ್ಕೆ ಪೂರಕವಾಗಿ ಪ್ರತಿಷ್ಠಿತ ಸಂಸ್ಥೆಯಾದ ಮೆ| ಮಿಟ್ಕಾನ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್, ಪುಣೆ ಇವರಿಂದ ವಿಸ್ತøತವಾದ ಯೋಜನಾ ವರದಿಯನ್ನು ತಯಾರಿಸಿದ್ದು, ಸದ್ರಿ ಯೋಜನಾ ವರದಿಯೊಂದಿಗೆ ಕಾರ್ಖಾನೆಯ ಪುನಶ್ಚೇತನಕ್ಕೆ ರೂ. 30 ಕೋಟಿಯಷ್ಟು ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ನೀಡಲಾಗಿದೆ. ಅಲ್ಲದೆ, ಕಾರ್ಖಾನೆಯ ಜಮೀನಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಥವಾ ಇನ್ನಿತರ ಸರ್ಕಾರಿ ಸಂಸ್ಥೆಗಳ ನಿರ್ಮಾಣಕ್ಕೆ 20 ಎಕ್ರೆ ಜಮೀನನ್ನು ಸರ್ಕಾರದಿಂದಲೇ ಖರೀದಿಸುವ ಮೂಲಕ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡುವಂತೆ ವಿನಂತಿಸಿ ಪ್ರಸ್ತಾವನೆ ನೀಡಲಾಗಿದೆ. ಆರ್ಥಿಕ ನೆರವು ಕೋರಿ ನಾವು ನೀಡಿರುವ ಪ್ರಸ್ತಾವನೆಗಳು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.
ರಾಜ್ಯ ಸರ್ಕಾರದ ಈ ಹಿಂದಿನ ಮುಖ್ಯಮಂತ್ರಿಯವರು 2018 ನೇ ಸೆಪ್ಟೆಂಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲೆಗೆ ಆಗಮಿಸಿದ ಸಂದರ್ಭ ಬ್ರಹ್ಮಾವರದಲ್ಲಿರುವ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸಹಕರಿಸುವುದಾಗಿ ಹಾಗೂ ವಾರಾಹಿ ನೀರಾವರಿ ಯೋಜನೆಯಿಂದ ದೊರೆಯುವ ನೀರನ್ನು ಬಳಸಿಕೊಂಡು ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಕಬ್ಬು ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದ್ದು, ಕಾರ್ಖಾನೆಯ ಪುನಶ್ಚೇತನಕ್ಕೆ ಪೂರಕವಾಗಿ ಕಬ್ಬು ಅಭಿವೃದ್ಧಿ ಪಡಿಸಲು ಮಂಡ್ಯ ಜಿಲ್ಲೆಯಿಂದ ಅಧಿಕ ಇಳುವರಿಯ ಹಾಗೂ ಉತ್ತಮ ತಳಿಯ ಕಬ್ಬಿನ ಬೀಜವನ್ನು ತರಿಸಿ ರೈತರಿಗೆ ವಿತರಣೆ ಮಾಡಲಾಗಿದ್ದು, ರೈತರು ಕಬ್ಬಿನ ಬೀಜೋತ್ಪಾದನೆಗಾಗಿ ಕಬ್ಬು ನಾಟಿ ಮಾಡಿದ್ದು, ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಕಬ್ಬು ನಾಟಿ ಮಾಡುವ ರೈತರಿಗೆ ಕಬ್ಬಿನ ಬೀಜ ಲಭ್ಯವಿದೆ ಎಂದರು.
ಕಾರ್ಖಾನೆಯ ಪುನಶ್ಚೇತನಕ್ಕೆ 30 ಕೋಟಿ ರೂ. ಗಳಷ್ಟು ಆರ್ಥಿಕ ನೆರವು ನೀಡುವಂತೆ ಅಥವಾ ಪುನಶ್ಚೇತನಕ್ಕೆ ಬೇಕಾಗುವ ಮೊಬಲಗು ಕ್ರೋಢೀಕರಣಕ್ಕೆ ಕಾರ್ಖಾನೆಯ ಒಟ್ಟು ಸ್ಥಿರಾಸ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಮೀನಿನಲ್ಲಿ ಅಗತ್ಯವಿರುವಷ್ಟು ಜಮೀನು ಮಾರಾಟಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರವನ್ನು ಇನ್ನೊಮ್ಮೆ ವಿನಂತಿಸುವ ಮೂಲಕ ಸ್ಥಗಿತಗೊಂಡ ಈ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದೆಂದು ಕಾರ್ಖಾನೆಯ ಅಧ್ಯಕ್ಷ ಎಚ್ ಜಯಶೀಲ ಶೆಟ್ಟಿಯವರು ತಿಳಿಸಿದರು.
ಸಭೆಯಲ್ಲಿ ಬಿ. ಭುಜಂಗ ಶೆಟ್ಟಿ, ಬಿ. ಭೋಜ ಹೆಗ್ಡೆ, ಜಯ ಶೆಟ್ಟಿ, ಉಮನಾಥ ಶೆಟ್ಟಿ ಶಾನಾಡಿ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಸತ್ಯನಾರಾಯಣ ಉಡುಪ, ಸಂತೋಶ್ ಶೆಟ್ಟಿ ಬಲಾಡೆ, ರಾಜೀವ ಶೆಟ್ಟಿ ಹೆಬ್ರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.