ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ – 9 ಮಂದಿ ವಶಕ್ಕೆ
ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ವಶಕ್ಕೆ ಪಡೆದ ಘಟನೆ ನೀಲಾವರ ಗ್ರಾಮದ ಕರ್ದಾಡಿ ಚಿತ್ತೇರಿ ದೇವಸ್ಥಾನದ ಬಳಿ ಶುಕ್ರವಾರ ನಡೆದಿದೆ.
ವಶಕ್ಕೆ ಪಡೆದವರನ್ನು ಪೆರ್ಡೂರು ನಿವಾಸಿ ಚಂದ್ರಶೇಖರ (25), ಕಲ್ಯಾಣಪುರ ಮೂಡುಕುದ್ರು ನಿವಾಸಿ ರೋಶನ್ (39), ನುಕ್ಕೂರು ಕಲ್ಲಗೋಳಿ ನಿವಾಸಿ ಸುಕೇಶ (25), ಬ್ರಹ್ಮಾವರ ಬೈದಬೆಟ್ಟು ನಿವಾಸಿ ಸಂಜೀವ ಪೂಜಾರಿ (52), ಮಣಿಪಾಲ ಶಾಂತಿನಗರ ನಿವಾಸಿ ಭಾಸ್ಕರ (55), ಬ್ರಹ್ಮಾವರ ಪೆಜಮಂಗೂರು ನಿವಾಸಿ ಕೊರಗ ಮರಕಾಲ (50), ಹಾರಾಡಿ ನಿವಾಸಿ ಅಶೋಕ ಪೂಜಾರಿ (33), ಸುರೇಶ ಗಾಣಿಗ (53), ಕಲ್ಯಾಣಪುರ ಕೋಟೆ ರೋಡ್ ನಿವಾಸಿ ವಾಸು ಪೂಜಾರಿ (68), ಎಂದು ಗುರತಿಸಲಾಗಿದೆ.
ಶುಕ್ರವಾರದಂದು ಬ್ರಹ್ಮಾವರ ಠಾಣಾಧಿಕಾರಿ ರಾಘವೇಂದ್ರ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದ ಕರ್ದಾಡಿ ಚಿತ್ತೇರಿ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದಾಗ ಓಡಿ ಹೋಗಲು ಪ್ರಯತ್ನಿಸಿದ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ 9ಮಂದಿಯನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಶಂಕರ್ ಮತ್ತು ಕಾರ್ತಿಕ್ ಎಂಬ ಇಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ಆರೋಪಿಗಳಿಂದ ಬಾಳುಕತ್ತಿ ಕಟ್ಟಿದ 2 ಹುಂಜ ಕೋಳಿ ಹಾಗೂ ಕೋಳಿ ಜೂಜಾಟಕ್ಕೆ ಬಳಸಿದ್ದ 6 ಹುಂಜ ಕೋಳಿ, ಒಟ್ಟು ರೂ. 4,500/- ಅಂದಾಜು ಮೌಲ್ಯದ 8 ಹುಂಜ ಕೋಳಿಗಳನ್ನು ಮತ್ತು ಎಲ್ಲಾ 9 ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ ಒಟ್ಟು ರೂ. 3100/- ಗಳನ್ನು ಅಲ್ಲದೇ ಕೋಳಿಗಳ ಕಾಲಿಗೆ ಕಟ್ಟಿದ 2 ಬಾಳು ಕತ್ತಿ, ಕಟ್ಟಲು ಉಪಯೋಗಿಸಿದ ಕಪ್ಪು ನೂಲಿನ ದಾರ -2 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.