ಭಟ್ಕಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ
ಭಟ್ಕಳ: ಕೇಂದ್ರ ಸರ್ಕಾರದ ವಕ್ಫ್ (ತಿದ್ದುಪಡಿ) ಕಾಯ್ದೆ 2025 ವಿರುದ್ಧ ಮುಸ್ಲಿಂ ಸಮುದಾಯದ ಆಕ್ರೋಶ ಭಟ್ಕಳದಲ್ಲಿ ಶಾಂತಿಯುತ ಪ್ರತಿಭಟನೆಯ ಮೂಲಕ ವ್ಯಕ್ತವಾಯಿತು. ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ ಸಾವಿರಾರು ಜನರು ಶುಕ್ರವಾರದ ಪ್ರಾರ್ಥನೆಯ ಬಳಿಕ ತಾಲೂಕು ಆಳಿತ ಸೌಧದ ಎದುರು ಸೇರಿ, ಈ ಕಾಯ್ದೆಯನ್ನು ಸಂಪೂರ್ಣ ರದ್ದುಗೊಳಿಸುವಂತೆ ಆಗ್ರಹಿಸಿದರು.
ವಕ್ಫ್ ಆಸ್ತಿಗಳಾದ ಮಸೀದಿಗಳು, ಮದರಸಾಗಳು, ಖಬರಸ್ಥಾನಗಳ ನಿರ್ವಹಣೆಯನ್ನು ಸರ್ಕಾರದ ನಿಯಂತ್ರಣಕ್ಕೆ ತರುವ ಈ ಕಾಯ್ದೆ, ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ಕಾಯ್ದೆ ಸಂವಿಧಾನದ 14, 25, ಮತ್ತು 26ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಆಕ್ಷೇಪಿಸಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ವಕ್ಫ್ ತಿದ್ದುಪಡಿ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ ವಹಿಸಿದ್ದರು.
ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳೀಗೆ ಮನವಿ ಸಲ್ಲಿಸಲಾಯಿತು. ತಹಸಿಲ್ದಾರ್ ನಾಗೇಂದ್ರ ಕೋಳಶೇಟ್ಟಿ ಉಪಸ್ಥಿತರಿದ್ದರು.
ಮಾಜಿ ಶಾಸಕ ಜೆ.ಡಿ. ನಾಯ್ಕ, ಈ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕೆ ತೀವ್ರ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾದ ಮೌಲಾನಾ ಇಲ್ಯಾಸ್ ನದ್ವಿ, ಮೌಲಾನಾ ಅಬ್ದುಲ್ ಅಲೀಂ ಖಾಸ್ಮಿ, ಮೌಲಾನಾ ಮಕ್ಬೂಲ್ ಕೋಬಟ್ಟೆ, ಮತ್ತು ಡಾ. ಅತೀಕುರ್ ರೆಹಮಾನ್ ಮುನಿರಿ, ಖಾಝಿ ಅಬ್ದುರ್ ರಬ್ ನದ್ವಿ, ಖಾಝಿ ಮೌಲಾನಾ ಖಾಜಾ ಮದನಿ, ಖಾಝಿ ಅಬ್ದುಸ್ ಸಮದ್ ಮುರ್ಡೇಶ್ವರ, ಮೌಲಾನಾ ಅಬ್ದುಲ್ ಅಲೀಂ ಖತೀಬ್, ಭಟ್ಕಳ ಪುರಸಭೆ ಅಧ್ಯಕ್ಷ ಮೊಹಿದ್ದೀನ್ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸೈಯದ್ ಇಮ್ಜ್ರಾನ್ ಲಂಕಾ, ಮೌಲಾನ ಆಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಹೋರಾಟವು ಯಾವುದೇ ಜಾತಿ, ಧರ್ಮ, ಅಥವಾ ರಾಜಕೀಯ ಪಕ್ಷದ ವಿರುದ್ಧವಲ್ಲ ಇದು ಕೇವಲ ಒಂದು ಕಾನೂನಿನ ವಿರುದ್ಧವಾಗಿದೆ ಎಂದು ಅಬ್ದುಲ್ ರಕೀಬ್ ಎಂ.ಜೆ. ತಿಳಿಸಿದ್ದಾರೆ.