ಭಟ್ಕಳದಲ್ಲಿ ಶಾಂತಿ ಮತ್ತು ಮಾನವೀಯತೆ ಕುರಿತ ವಿಚಾರ ಗೋಷ್ಟಿ
ಭಟ್ಕಳ: ಸಮಾಜ ವ್ಯಕ್ತಿಯನ್ನು ಬೆಳೆಸುವ ರೀತಿಯಲ್ಲಿ ಅವನ ಗುಣಗಳು ಬದಲಾಗುತ್ತವೆ, ಹುಟ್ಟಿನಿಂದಲೂ ಮಾನವ ಶಾಂತಿ ಪ್ರೀಯನಾಗಿದ್ದಾನೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ಅಖಿಲ ಭಾರತ ಕಾರ್ಯದರ್ಶಿ ಮೌಲಾನ ವಲಿಯುಲ್ಲಾ ಸಯೀದಿ ಫಲಾಹಿ ಹೇಳಿದರು.
ಅವರು ಇಲ್ಲಿನ ರಾಯಲ್ ಓಕ್ ಹೋಟೆಲ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಆಯೋಜಿಸಿದ್ದ ಶಾಂತಿ ಮತ್ತು ಮಾನವೀಯತೆ ಕುರಿತ ವಿಚಾರ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಸಮಾಜದಲ್ಲಿ ಕೇವಲ ಶೇ.1ರಷ್ಟು ಜನರು ಹಿಂಸೆಯನ್ನು ಪ್ರಚೋದಿಸುತ್ತಿದ್ದು, ಉಳಿದವರು ಶಾಂತಿಯ ಬದುಕನ್ನು ಇಷ್ಟ ಪಡುತ್ತಾರೆ. ಬ್ರೀಟಿಷರ ಒಡೆದಾಳುವ ನೀತಿ ಈಗಲೂ ಮುಂದುವರೆದಿದೆ ಎಂದೂ ಹೇಳಿದ ಅವರು ಶಿಕ್ಷಣವು ಸಮಾಜದಲ್ಲಿ ಮನುಷ್ಯನ ಹೊಣೆಗಾರಿಕೆಯನ್ನು ನೆನಪಿಸದೇ ಇದ್ದರೆ ಅದಕ್ಕೆ ಅರ್ಥವಿಲ್ಲ ಎಂದ ಅವರು, ದೇವನ ಬಗ್ಗೆ ಹಾಗೂ ಕಾನೂನಿನ ಬಗ್ಗೆ ಭಯವಿದ್ದರೆ ಯಾವುದೇ ಕಾನೂನು ಭಂಗವಾಗದು ಎಂದರು.
ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹ್ಮದ್ ಕುಂಞ ಮಾತನಾಡಿ, ದೇಶದಲ್ಲಿ ಸಂಘರ್ಷವನ್ನು ಶಾಶ್ವತವಾಗಿರಿಸುವ ಪ್ರಯತ್ನ ನಡೆದಿದೆ. ಇಂದು ಹಳ್ಳಿಗಳೂ ಭಯಾನಕತೆಯತ್ತ ವಾಲುತ್ತಿವೆ. ಇದರಿಂದ ದೇಶದ ಅಭಿವೃದ್ಧಿಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಐಸಿಸ್‍ನಂತಹ ಸಂಘಟನೆಯನ್ನು ಜಗತ್ತಿನ ಯಾವುದೇ ಇಸ್ಲಾಮ್ ವಿದ್ವಾಂಸನೂ ಬೆಂಬಲಿಸುವುದಿಲ್ಲ. ಎಲ್ಲ ಧರ್ಮವೂ ಮನುಷ್ಯತ್ವವನ್ನು ಸಾರುತ್ತದೆ ಎಂದರು.
ಅಂಜುಮಾನ್ ಕಾಲೇಜಿನ ಕನ್ನಡ ಉಪನ್ಯಾಸಕ ಆರ್.ಎಸ್.ನಾಯಕ್ ಮಾತನಾಡಿ, ಜಗತ್ತು ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ. ಕೋಮು ಪ್ರೀತಿ ಮಿತಿ ಮೀರಿದ್ದು, ಮನುಷ್ಯ ಕುಲವನ್ನು ಧರ್ಮ ಒಡೆಯುತ್ತಿದೆ. ಧರ್ಮದ ಹುಚ್ಚು ನಮ್ಮನ್ನು ಅಧೋಗತಿಗೆ ಒಯ್ಯುತ್ತಿದೆ. ನಿಸರ್ಗ ಧರ್ಮ ಪಾಲನೆಯೊಂದೇ ಪರಸ್ಪರ ಸ್ನೇಹಕ್ಕೆ ರಹದಾರಿಯಾಗಿದೆ ಎಂದರು.
ಮಂಗಳೂರು ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯೆ ಸಿಸ್ಟರ್ ಲೋರಾ ಕೋರ್ಹಾ ಮಾತನಾಡಿ ಬಾಲ್ಯದಿಂದ ನೈತಿಕ ಶಿಕ್ಷಣವನ್ನು ಮಕ್ಕಳಲ್ಲಿ ತುಂಬುವ ಮೂಲಕ ಪುರಾತನ ಬಹು ಸಂಸ್ಕತಿಯ ಭಾರತವನ್ನು ನಮ್ಮದಾಗಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಶಾಂತಿ ಮತ್ತು ಮಾನವೀಯತೆ ಅಭಿಯಾನದ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಎಂ.ಆರ್.ಮಾನ್ವಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಸಲಹಾ ಸಮಿತಿ ಸದಸ್ಯ ಲಿಯಾಖತ್ ಮುಲ್ಲಾ, ಸ್ವಾಗತ ಸಮಿತಿಯ ಸದಸ್ಯರಾದ ಜೆ.ಎನ್.ನಾಯ್ಕ, ಭಾಸ್ಕರ ನಾಯ್ಕ, ವೆಂಕಟೇಶ ನಾಯ್ಕ, ರಾಧಾಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೌಲಾನಾ ಝೀಯಾವುರ್ರಹ್ಮಾನ್ ನದ್ವಿ ಕುರ್‍ಆನ್ ಪಠಿಸಿದರು. ನವಾಝ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್‍ಜಬ್ಬಾರ್ ಅಸದಿ ಅನುವಾದಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣದ ಬಗ್ಗೆ ಭಟ್ಕಳ ಸಹಾಯಕ ಆಯುಕ್ತರ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಅಂಗವಾಗಿ ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣದ ಬಗ್ಗೆ ಭಟ್ಕಳ ಸಹಾಯಕ ಆಯುಕ್ತರ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣ ಸಮಾಜದ ಒಡಕು, ಜಾತೀಯ ಮತ್ತು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಣ, ದ್ವೇಷ ಮತ್ತು ಕೋಮು ಉದ್ವಿಗ್ನತೆ ಕಾರಣವಾಗುತ್ತಿವೆ. ಸಾಮಾಜಿಕ ಅಸಮಾನತೆಗಳಂತ ಕೆಡುಕು ಮತ್ತು ಪಾಪಗಳು ದೇಶ ವಿಭಜನೆಗೂ ಕಾರಣವಾಗಿದ್ದು ಕೆಲವು ಜನಪ್ರತಿನಿಧಿಗಳು ಜಾತಿ ಕೋಮುಗಳ ವಿರುದ್ದ ಅವಹೇಳನಕಾರಿ ಭಾಷೆ ಕೆಲವೊಂದು ನಿಶ್ಚಿತ ಧರ್ಮದ ಜನರಿಗೆ ಆಸ್ತಿಯ ಮಾರಾಟ ಮತ್ತು ಬಾಡಿಗೆಗೆ ಕೊಡುವುದನ್ನು ನಿರಾಕರಿಸುವುದು ಇತ್ಯಾದಿ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಶಾಶ್ವತ ಒಡಕನ್ನುಂಟುಮಾಡುವ ದುಷ್ಟ ಅಭಿಯಾನವೇ ನಡೆಯುತ್ತಿದೆ.
ಕೊಲೆ ಹಿಂಸೆ ಥಳಿತ ಪ್ರಚೋದಕ ಉದ್ರೇಕಕಾರಿ ಭಾಷಣದ ಆರೋಪಗಳಿರುವ ಹಾಗೂ ಪ್ರಚೋದನಕಾರಿ, ಬೆದರಿಕೆ ಹೇಳಿಕೆ ನಿಡುವ ಸಚಿವರು ಸಂಸದರು ಪಕ್ಷದ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಿ ಅವರ ವಿರುದ್ದ ಕಾನುನು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್.ಎಮ್. ಸೈಯದ್ ಖಲೀಲುರ್ರೆಹ್ಮಾನ್, ಮುಜಾಹಿದ್ ಮುಸ್ತಪಾ, ಅಲ್ತಾಪ್ ಖರೂರಿ, ಸೈಯದ್ ಅಶ್ರಫ್ ಬರ್ಮಾವರ್ ಮುಂತಾದವರು ಉಪಸ್ಥಿತರಿದ್ದರು.
No comments.