ಭಟ್ಕಳದ ಮೂಗಿ ಮಹಿಳೆ ನಾಪತ್ತೆ; ಪತ್ತೆಗೆ ಸಹಕರಿಸುವಂತೆ ಕುಟುಂಬಿಕರ ಮನವಿ
ಉಡುಪಿ: ಬಾಯಿಯೂ ಬಾರದ ಹಾಗೂ ಕಿವಿಯೂ ಕೇಳದ ಭಟ್ಕಳದ ಮಹಿಳೆಯೊಬ್ಬರು ಭಟ್ಕಳ -ಮಂಗಳೂರು ದಾರಿ ತಪ್ಪಿ ನಾಪತ್ತೆಯಾಗಿರುವ ಘಟನೆ ಜೂ.23ರಂದು ನಡೆದಿದೆ.
ಭಟ್ಕಳದ ಮಗ್ದೂಮ್ ಕಾಲನಿಯ ಜುಲೇಖಾ(50) ನಾಪತ್ತೆಯಾದ ಮಹಿಳೆ. ಇವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದು, ಮೂವರಿಗೂ ಮದುವೆಯಾಗಿದೆ. ಮಗ ಪತ್ನಿ ಜೊತೆ ಹೆಮ್ಮಾಡಿಯ ಸಂತೋಷ ನಗರದಲ್ಲಿ ವಾಸವಾಗಿದ್ದಾನೆ. ಜೂ.23ರಂದು ಮೊಮ್ಮಗನನ್ನು ನೋಡಲೆಂದು ಜುಲೇಖಾ ಬೆಳಿಗ್ಗೆ 9ಗಂಟೆ ಸುಮಾರಿಗೆ ಭಟ್ಳಳದಿಂದ ಖಾಸಗಿ ಏಕ್ಸ್‍ಪ್ರೆಸ್‍ನಲ್ಲಿ ಒಬ್ಬರೇ ಹೆಮ್ಮಾಡಿಗೆ ಹೊರಟಿದ್ದರು. ಅವರು ಒಬ್ಬರೇ ಹೊರಗೆ ಬಂದಿರುವುದು ಇದೇ ಪ್ರಥಮ.
ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದ ಹೆಮ್ಮಾಡಿಯ ಗುರುತು ಹಿಡಿ ಯದ ಜುಲೇಖಾರನ್ನು ಬಸ್ ನಿರ್ವಾಹಕ ನೇರವಾಗಿ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇಳಿಸಿ ಹೋಗಿದ್ದಾನೆ. ಅಲ್ಲಿ ಇಳಿದ ಜುಲೇಖಾ ಹತ್ತಿರದಲ್ಲಿರುವ ರಿಕ್ಷಾ ನಿಲ್ದಾಣದ ಬಳಿ ತೆರಳಿ ತನ್ನ ಮೂಗ ಭಾಷೆಯಲ್ಲಿ ತನ್ನನ್ನು ಕೋಟೇಶ್ವರದತ್ತ ಕೈತೋರಿಸಿ ಕರೆದುಕೊಂಡು ಹೋಗುವಂತೆ ಅಲವತ್ತುಕೊಂಡಿದ್ದರು.
ಆದರೆ ಜುಲೇಖಾ ಸರಿಯಾಗಿ ವಿಳಾಸ ಹೇಳಲಾಗದೆ ಪರಿತಪಿಸುತ್ತಿದ್ದರು. ಆಗ ಓರ್ವ ರಿಕ್ಷಾ ಚಾಲಕ ಮಾನವೀಯ ನೆಲೆಯಲ್ಲಿ ಅವರನ್ನು ಹತ್ತಿಸಿಕೊಂಡು ಅವರು ಸೂಚಿಸಿದ ದಿಕ್ಕಿನತ್ತ ಹೊರಟ. ಹೆಮ್ಮಾಡಿಗೆ ಸೇರಬೇಕಾದ ಜುಲೇಖಾ ರಸ್ತೆ ಗೊತ್ತಿಲ್ಲದೆ ಕೋಟೇಶ್ವರದತ್ತ ಸಾಗಿದರು. ಬಳಿಕ ಕೋಟೇಶ್ವರದಲ್ಲಿ ಆಕೆಯನ್ನು ಕೋಟತಟ್ಟು ಕಡೆ ಕರೆದುಕೊಂಡು ಹೋದನು. ಅಲ್ಲಿಯೂ ಅವರ ಮನೆ ಸಿಗ ದಾಗ ಚಾಲಕ ಆಕೆಯನ್ನು ಸಾಲಿಗ್ರಾಮ ಬಸ್ ನಿಲ್ದಾಣದ ಬಳಿ ಬಲವಂತವಾಗಿ ಇಳಿಸಿ ಹೋಗಿದ್ದಾನೆ.
ಅದರ ನಂತರ ಜುಲೇಖಾ ನಾಪತ್ತೆಯಾಗಿದ್ದಾರೆ. ಎಲ್ಲಿ ಹೋಗಿದ್ದಾರೆ ಎಂಬ ಸುಳಿವೇ ಇಲ್ಲ. ಈ ಬಗ್ಗೆ ಭಟ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ ಅವರ ಭಾವಚಿತ್ರವಿರುವ ಪೋಸ್ಟರ್‍ಗಳನ್ನು ಜಿಲ್ಲೆಯ ಹಲವೆಡೆ ಅಂಟಿಸ ಲಾಗಿದೆ. ಜುಲೇಖಾ ಕುರಿತು ಮಾಹಿತಿ ದೊರೆತವರು ಮೊಬೈಲ್ ನಂ. 9148653627, 9945739629 ಅಥವಾ ಹತ್ತಿರ ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ