ಭಟ್ಕಳ: ದುರ್ಗಾಪರಮೇಶ್ವರಿ ದೇವಸ್ಥಾನದ 40 ಲಕ್ಷ ರೂ. ಮೌಲ್ಯದ ಆಭರಣ ಕಳವು, ಅರ್ಚಕ ನಾಪತ್ತೆ

Spread the love

ಭಟ್ಕಳ: ದುರ್ಗಾಪರಮೇಶ್ವರಿ ದೇವಸ್ಥಾನದ 40 ಲಕ್ಷ ರೂ. ಮೌಲ್ಯದ ಆಭರಣ ಕಳವು, ಅರ್ಚಕ ನಾಪತ್ತೆ

ಭಟ್ಕಳ: ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ ಸುಮಾರು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳುವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ನಡೆದಿದೆ. ಸೋಮವಾರ ರಾತ್ರಿ ಘಟನೆ ಬೆಳಕಿಗೆ ಬಂದಾಗಿನಿಂದ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅರ್ಚಕ ಸಹ ನಾಪತ್ತೆಯಾಗಿದ್ದಾನೆ ಎಂದು ದೇವಾಲಯದ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

ನಾಪತ್ತೆಯಾದ ಅರ್ಚಕನನ್ನು ಯೆಲ್ಲಾಪುರ ನಿವಾಸಿ ಸತೀಶ್ ಭಟ್ ಎಂದು ದೇವಾಲಯದ ಆಡಳಿತ ದೂರಿನಲ್ಲಿ ಉಲ್ಲೇಖಿಸಿದೆ.

ದೇವರಿಗೆ ನವರಾತ್ರಿ ಸಮಯ ಆಭರಣಗಳನ್ನು ತೊಡಿಸಲು ದೇವಾಲಯದ ಪ್ರಧಾನ ಅರ್ಚಕರು ಆಭರಣ ಪೆಟ್ಟಿಗೆಯನ್ನು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಭರಣ ಲಾಕರ್‌ನ ಕೀಲಿಗಳನ್ನು ಹೊಂದಿದ್ದ ಕಾರಣ ದೇವಾಲಯದ ಅಧಿಕಾರಿಗಳು ಸತೀಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಸತೀಶ್ ಸಂಪರ್ಕ ಸಾಧ್ಯವಾಗಿಲ್ಲ. ಆಗ ದೇವಸ್ಥಾನ ಆಡಳಿತ ಮಂಡಳಿ ಲಾಕರ್ ತೆರೆಯಲು ನಿರ್ಧರಿಸಿದೆ. ನವರಾತ್ರಿಯ ಸಮಯ ದೇವರಿಗೆ ಆಭರಣ ತೊಡಿಸುವುದು ಸಂಪ್ರದಾಯವಾಗಿದೆ,

ಸತೀಶ್ ಕಳೆದ ವರ್ಷದೇವಸ್ಥಾನದ ಕೆಲಸಕ್ಕೆ ಸೇರಿದ್ದ. ಆದರೆ ಕಳೆದೊಂದು ತಿಂಗಳಿನಿಂದ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ.ದೇವಸ್ಥಾನದ ಆಡಳಿತ ಕಡೆಯ ಬಾರಿಗೆ ಶುಕ್ರವಾರ ಸತೀಶ್ ಜತೆ ದೂರವಾಣಿಯಲ್ಲಿ ಮಾತನಾಡಿದೆ. ಆದರೆ ಶನಿವಾರದಿಂದ ಆತನ ಸಂಪರ್ಕ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸತೀಶ್ ಭಟ್ ಪತ್ತೆಗಾಗಿ ಯೆಲ್ಲಾಪುರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.


Spread the love