ಭಾನುವಾರ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ, ಉಜಿರೆ ಭೇಟಿ

Spread the love

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ, ಉಜಿರೆ ಭೇಟಿ 

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದೇವರ ದರ್ಶನದ ಬಳಿಕ ಉಜಿರೆಗೆ ರಸ್ತೆ ಮೂಲಕ ಆಗಮಿಸುವರು.

ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶದಲ್ಲಿ ಹೆಗ್ಗಡೆಯವರ ನೂತನ ಸಂಕಲ್ಪವಾದ “ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ” ಅಭಿಯಾನವನ್ನು ಪ್ರಧಾನಿ ಉದ್ಘಾಟಿಸುವರು.

ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ವಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಅವರಿಗೆ ರುಪೇ ಕಾರ್ಡ್‍ಗಳನ್ನು ಮೋದಿ ವಿತರಿಸುವರು.

ಸ್ವ-ಸಹಾಯ ಸಂಘಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತವಾಗಿ ಮಾಡಿ ತಂತ್ರಾಂಶ ಆಧಾರಿತ ವ್ಯವಹಾರಗಳನ್ನು ಪ್ರೇರೆಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು ಪ್ರಧಾನಿಯವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಬೀಳಲಿದೆ.

ಸಚಿವರುಗಳಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿ. ರಮಾನಾಥ ರೈ, ಸಂಸದರಾದ ಬಿ. ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಡಿ. ವೀರೇಂದ್ರ ಹೆಗ್ಗಡೆಯವರು, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.

ಸಮಾವೇಶದಲ್ಲಿ ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ನಕ್ಸಲ್ ನಿಗ್ರಹಗಳದವರು ಉಜಿರೆ, ಧರ್ಮಸ್ಥಳ ಮತ್ತು ಕನ್ಯಾಡಿಯಲ್ಲಿ ಶುಕ್ರವಾರ ಕೂಂಬಿಂಗ್ ನಡೆಸಿದರು.

ವಾಹನ ನಿಲುಗಡೆ: ಬೆಳ್ತಂಗಡಿ ಕಡೆಯಿಂದ ಬರುವವರು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಾಥಮಿಕ ಶಾಲೆ ಬಳಿ ಮತ್ತು ಅಜ್ಜರ ಕಲ್ಲು ಮೈದಾನದಲ್ಲಿ ಹಾಗೂ ಇತತರರು ಜನಾರ್ಧನ ಸ್ವಾಮಿ ದೇವಸ್ಥಾನದ ಬಳಿ ವಾಹನಗಳನ್ನು ನಿಲ್ಲಿಸಬಹುದು.

ಧರ್ಮಸ್ಥಳ ದಿಂದ ಉಜಿರೆಗೆ ಭಾನುವಾರ ಬೆಳಿಗ್ಗೆ 9 ಗಂಟೆ ವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದೆ. 9 ಗಂಟೆ ಬಳಿಕ ಅಪರಾಹ್ನ ಎರಡು ಗಂಟೆವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಭಾನುವಾರ ಬೆಳಿಗ್ಗೆ 7ರಿಂದ ಅಪರಾಹ್ನ 2 ಗಂಟೆ ವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಸೂಚನೆ: ಸಮಾರಂಭದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಬೆಳಿಗ್ಗೆ ಹತ್ತು ಗಂಟೆಗೆ ಮೊದಲು ಬಂದು ಆಸೀನರಾಗಬಹುದು.

ಸಾರ್ವಜನಿಕರು ಉಜಿರೆ ಕಡೆಯಿಂದ ಬೆಳಾಲು ರಸ್ತೆ ಮೂಲಕ ಕ್ರೀಡಾಂಗಣ ಪ್ರವೇಶಿಸಬಹುದು.

ವಿ.ಐ.ಪಿ. ಪಾಸ್ ಹೊಂದಿರುವವರು ಎಸ್.ಡಿ.ಎಂ. ಕಾಲೇಜು ಬಳಿ ನಿರ್ಮಿಸಿದ ದ್ವಾರದ ಮೂಲಕ ಪ್ರವೇಶಿಸಬಹುದು.

ಭದ್ರತೆಗಾಗಿ ಉಜಿರೆ ಮತ್ತು ಧರ್ಮಸ್ಥಳದಲ್ಲಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ.

ಕ್ರೀಡಾಂಗಣದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಎಲ್ಲಾ ಕಡೆಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗಿದೆ.

ವೇಳಾಪಟ್ಟಿ: ಬೆಳಿಗ್ಗೆ 10.30ಕ್ಕೆ ಮಂಗಳೂರಿನಿಂದ ವಿಶೇಷ ಸೇನಾ ಹೆಲಿಕಾಪ್ಟರ್‍ನಲ್ಲಿ ಹೊರಟು ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಆಗಮನ
11.00 ಗಂಟೆಗೆ ಹೆಗ್ಗಡೆಯವರ ನಿವಾಸ
11.30ಕ್ಕೆ ದೇವರ ದರ್ಶನ
11.40ಕ್ಕೆ ರಸ್ತೆ ಮೂಲಕ ಉಜಿರೆಗೆ ಪ್ರಯಾಣ
12.00 ಗಂಟೆಗೆ ಸಮಾವೇಶದಲ್ಲಿ ಭಾಗವಹಿಸುವರು
12.50ಕ್ಕೆ ರಸ್ತೆ ಮೂಲಕ ಧರ್ಮಸ್ಥಳ ಹೆಲಿಪ್ಯಾಡ್‍ಗೆ ಪ್ರಯಾಣ
1.10ಕ್ಕೆ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ


Spread the love