ಭಾರತೀಯ ವೈದ್ಯಶಾಸ್ತ್ರ ಜಗತ್ತಿಗೆ ಪರಿಚಯವಾಗಲಿ : ಡಾ. ಕಿರಿಶಾಲ್
ಮೂಡುಬಿದಿರೆ(ವಿದ್ಯಾಗಿರಿ) : ಭಾರತ ಆಯುರ್ವೇದದ ಕಣಜ. ಜಾಗತಿಕ ಮಟ್ಟದಲ್ಲಿ ಆಯುರ್ವೇದ ಕಾಣಿಸಿಕೊಳ್ಳುತ್ತಿದೆ. ವಿಶ್ವದಾದ್ಯಂತ ಈಗ ಆಯುವೇದಕ್ಕೆ ಬಹು ಬೇಡಿಕೆಯಿದೆ ಎಂದು ನವದೆಹಲಿಯ ಸಿಸಿಐಎಮ್ನ ಕಾರ್ಯನಿರ್ವಾಹಕ ಸದಸ್ಯ ಡಾ. ಆನಂದ್ ಕಿರಿಶಾಲ್ ಹೇಳಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಮನೋವಿಜ್ಞಾನ ಎವಂ ಮಾನಸ ರೋಗ ವಿಭಾಗದಿಂದ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ‘ಸಪೋರ್ಟಿವ್ ಥೆರಪಿ’ ರಾಷ್ಟ್ರಮಟ್ಟದ ‘ಮನಸ್ವಿ 2020’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದದ ಮಹತ್ವವನ್ನು ಜಗತ್ತಿಗೆ ಅನಾವರಣಗೊಳಿಸಬೇಕು. ಭಾರತೀಯ ವೈದ್ಯಶಾಸ್ತ್ರವನ್ನು ಪ್ರಪಂಚಕ್ಕೆ ಪರಿಚಯಿಸುವಲ್ಲಿ ನಾವು ಕಾರ್ಯೋನ್ಮುಖರಾಗಬೇಕು. ಈಗಾಗಲೇ ಆಯುರ್ವೇದ ಶಿಕ್ಷಣ 45 ದೇಶಗಳಲ್ಲಿದೆ. ಆಯುರ್ವೇದ ಶಿಕ್ಷಣ ಜಗತ್ತಿನಾದ್ಯಂತ ಹರಡಲಿ. ಆಯುರ್ವೇದದಲ್ಲಿ ಅವಕಾಶ ಅಗಾಧವಾಗಿ ತೆರೆದುಕೊಳ್ಳುವಂತೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಎಮ್.ಪಿ ಸ್ಟಾನಿ ಮಾತನಾಡಿ, ಮನೋರೋಗ ಒತ್ತಡದಿಂದ ಉಂಟಾಗುವುದು. ಸೂಕ್ತ ಸಮಯ ಪರಿಪಾಲನೆ ಇಲ್ಲದಿದ್ದಾಗ ಒತ್ತಡ ಸೃಷ್ಟಿಯಾಗುತ್ತದೆ. ಮನೋವೇದನೆಯ ನಿವಾರಣೆಗೆ ಪರಿಹಾರ ನಮ್ಮಲ್ಲೇ ಇದೆ. ಸ್ಥಿತಿ, ಸಂಬಂಧ ಅರಿವಾದಾಗ ಮನೋಸಮಸ್ಯೆ ಸುಧಾರಿಸುವುದಕ್ಕೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಹೆಲ್ತ್ ಸೆಂಟರ್ನ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ವಿನಯ್ ಆಳ್ವ ಮಾತನಾಡಿ, ಖಿನ್ನತೆ ನಮ್ಮ ಬದುಕಿನಲ್ಲಿ ಸರಿಯಾದ ರೂಪುರೇಷೆ ಇಲ್ಲದಿದ್ದಾಗ ಹುಟ್ಟುತ್ತದೆ. ಋಣಾತ್ಮಕ ಸಂಬಂಧಗಳನ್ನು ದೂರ ಮಾಡುವುದರಿಂದ, ಧನಾತ್ಮಕ ಚಿಂತನೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಸಮಚಿತ್ತದ ಮನಸ್ಥಿತಿ ಇರುತ್ತದೆ ಎಂದರು.
ಈ ಸಂದರ್ಭ ಆಯುರ್ವೇದದಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಅಶ್ವಿನಿ ಶೃಂಗಾ ಅವರಿಗೆ 15,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ದ್ವಿತೀಯ ಸ್ಥಾನ ಪಡೆದ ಡಾ. ನಾಜ್ಹ್ ಅವರಿಗೆ 10,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಿಮಾಲಯ ಡ್ರಗ್ ಕಂಪೆನಿ ವತಿಯಿಂದ ನೀಡಿ ಗೌರವಿಸಲಾಯಿತು.
ಆಳ್ವಾಸ್ ಹೆಲ್ತ್ ಸೆಂಟರ್ನ ಮ್ಯಾನೇಜ್ಮೆಂಟ್ ಟ್ರಸ್ಟಿ ಡಾ. ಹನಾ ಆಳ್ವ, ಹಿಮಾಲಯ ಡ್ರಗ್ ಕಂಪೆನಿಯ ಡಾ. ಮಹಮ್ಮದ್ ಉಸ್ಮಾನ್ ಮುನ್ಶಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜನಾ ಸಮಿತಿಯ ಉಪಾಧ್ಯಕ್ಷ ಡಾ. ಅನಿಲ್ ಕುಮಾರ್ ರೈ ಪ್ರಸ್ತಾವಿಸಿ, ಸಂಯೋಜನಾ ಸಮಿತಿಯ ಅಧ್ಯಕ್ಷೆ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಜೆನಿಕಾ ಡಿ’ಸೋಜಾ ಸ್ವಾಗತಿಸಿ, ಸಂಯೋಜನಾ ಸಮಿತಿಯ ಕಾರ್ಯದರ್ಶಿ ಡಾ. ರವಿಪ್ರಸಾದ್ ಹೆಗ್ಡೆ ವಂದಿಸಿದರು. ಉಪನ್ಯಾಸಕಿ ಡಾ. ಗೀತಾ ಬಿ. ಮಾರ್ಕಾಂಡೆ ಕಾರ್ಯಕ್ರಮ ನಿರ್ವಹಿಸಿದರು.