Home Mangalorean News Kannada News ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಜೈಲು ಅಧಿಕಾರಿಗಳ ರಾಜೋಪಚಾರ !

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಜೈಲು ಅಧಿಕಾರಿಗಳ ರಾಜೋಪಚಾರ !

Spread the love

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಜೈಲು ಅಧಿಕಾರಿಗಳ  ರಾಜೋಪಚಾರ !

ಉಡುಪಿ;:  ಅಲ್ಲಿ ಬೆಂಗಳೂರಿನ ಜೈಲಿನಲ್ಲಿ ಶಶಿಕಲಾ ಅವರಿಗೆ ಜೈಲಿನಲ್ಲಿ ಜೈಲು ಅಧಿಕಾರಿಗಳು ರಾಜೋಪಚಾರ ನೀಡಿದ್ದು ವಿವಾದವಾಗಿದ್ದರೆ, ಇತ್ತ ಮಂಗಳೂರಿನ ಜೈಲು ಅಧಿಕಾರಿಗಳು ಗಂಡನನ್ನೇ ಅಮಾನುಷವಾಗಿ ಕೊಂದ ಆರೋಪಿ ರಾಜೇಶ್ವರಿ ಶೆಟ್ಟಿ ನ್ಯಾಯಾಲಯಕ್ಕೆ ಬರುವುದಕ್ಕೆ ಹವಾನಿಯಂತ್ರಿತ ಇನ್ನೊವಾ ಕಾರು ಒದಗಿಸಿ ಇನ್ನೊಂದು ವಿವಾದ ಹುಟ್ಟು ಹಾಕಿದ್ದಾರೆ.

 

ನಾಡಿನಾದ್ಯಂತ ಚರ್ಚೆಗೆ ಕಾರಣವಾಗಿರುವ ಉಡುಪಿಯ ಎನ್‍ಆರ್.ಐ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಥಳಿಸಿ, ವಿಷವಿಕ್ಕಿ, ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಹೊಮಕುಂಡದಲ್ಲಿ ಸುಟ್ಟು ಹಾಕಿದ ಆರೋಪಿ ಪತ್ನಿ ರಾಜೇಶ್ವರಿ ಶೆಟ್ಟಿ (51), ಮಗ ನವನೀತ್ ಶೆಟ್ಟಿ (21) ಮತ್ತು ಆಕೆಯ ಪ್ರಿಯಕರ ನಿರಂಜನ ಭಟ್ (27) ಅವರು ಸೋಮವಾರ ಮಂಗಳೂರು ಜೈಲಿನಿಂದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಇನ್ನೊವಾ ಕಾರಿನಲ್ಲಿ ಬಂದಿಳಿದರು. ನ್ಯಾಯಾಲಯದ ಕಲಾಪಗಳು ಮುಗಿದು ಅದೇ ಕಾರಿನಲ್ಲಿ ಜೈಲಿಗೆ ಮರಳಿದರು. ಅವರೊಂದಿಗೆ ಒಬ್ಬ ಪೋಲೀಸ್ ಪೇದೆ ಮಾತ್ರ ಕಾರಿನಲ್ಲಿದ್ದ

ಆರೋಪಿಗಳನ್ನು ಪೋಲೀಸರು ಸಾಧಾರಣವಾಗಿ ತಮ್ಮ ಜೀಪಿನಲ್ಲಿ ಅಥವಾ ವ್ಯಾನಿನಲ್ಲಿ ಕರೆದುಕೊಂಡು ಬರುತ್ತಾರೆ. ಆದರೇ ಈ ಆರೋಪಿಗಳಿಗೆ ಇಂತಹ ವಿಶೇಷ ರಾಜೋಪಚಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಜೈಲಿನ ಪೋಲೀಸ್ ಅಧಿಕಾರಿಗಳ ಬಗ್ಗೆ ಪೋಲೀಸ್ ಇದೀಗ ಚರ್ಚೆಗಳು ಆರಂಭವಾಗಿವೆ. ಖಾಸಗಿ ಕಾರಿನಲ್ಲಿ ಪೋಲೀಸರು ಆರೋಪಿಗಳಿಗೆ ಹೇಗೆ ರಕ್ಷಣೆ ನೀಡಬಹುದು ಮತ್ತು ಅವರ ಮೇಲೆ ಹೇಗೆ ನಿಗಾ ಇಡಬಹುದು ಎಂಬ ಸಂಶಯ ಉಂಟಾಗಿವೆ.

ಆರೋಪಿಗಳು ಇಂತಹ ಕಾರಿನಲ್ಲಿ ನ್ಯಾಯಾಲಯಕ್ಕೆ ಆಗಮಿಸುತ್ತಿರುವುದನ್ನು ಮಾಧ್ಯಮಗಳ ಕಣ್ಣುತಪ್ಪಿಸುವುದಕ್ಕೆ ಪೋಲೀಸರು ಪೂರಾ ಪ್ರಯತ್ನವನ್ನು ಕೂಡ ಮಾಡಿದರು. ಮಾಧ್ಯಮದವರು ನ್ಯಾಯಾಲಯದ ಮುಂಭಾಗದ ಬಾಗಿಲಿನಲ್ಲಿ ಕಾಯುತ್ತಿದ್ದರೇ, ಪೋಲೀಸರು ಆರೋಪಿಗಳನ್ನು ನ್ಯಾಯಾಲಯದ ಹಿಂಬಾಗಿಲಿಂದ ಒಳಗೆ ಕರೆತಂದರು. ಹಿಂದಕ್ಕೆ ಹೋಗುವಾಗಲೂ ಅದೇ ಬಾಗಿಲಿನಿಂದ ಹೊರಗೆ ಕರೆದುಕೊಂಡು ಹೋದರು.

ರಾಜೇಶ್ವರಿ ಶೆಟ್ಟಿ ಅವರು ತಮಗೆ ಈ ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಉಡುಪಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಕೊನೆಗೆ ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಿ, ವಿಫಲರಾಗಿದ್ದಾರೆ.

ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಈ ಪ್ರಕರಣದ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು, ಅದರಂತೆ ಸೋಮವಾರ ಆರೋಪಿಗಳ ಮೇಲೆ ನ್ಯಾಯಾಲಯವು ದೋಷಾರೋಪವನ್ನು (ಆರೋಪಿಗಳ ಮೇಲೆ ಹೊರಿಸಲಾದ ಆರೋಪಗಳನ್ನು ಆರೋಪಿಗಳಿಗೆ ತಿಳಿಸುವ ಪ್ರಕ್ರಿಯೆ) ಮಾಡುವುದಕ್ಕೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆದರೇ ಸರ್ಕಾರಿ ವಕೀಲರಾದ ಶಾಂತಿ ಬಾಯಿ ಅವರು ಈ ದೋಷಾರೋಪಣೆ ಪಟ್ಟಿಗೆ ಹೆಚ್ಚುವರಿ ದೋಷಾರೋಪಣೆಗಳನ್ನು ಸಲ್ಲಿಸಲು ಬಾಕಿ ಇರುವುದರಿಂದ, ಅದಕ್ಕೆ ಅವಕಾಶ ಕೇಳಿದರು. ಅದರಂತೆ ಸೋಮವಾರದ ಕಲಾಪ ಮುಂದೂಡಲ್ಪಟ್ಟಿತು.

ಈ ಬಗ್ಗೆ ಮಾತನಾಡಿದ ಉಡುಪಿಯ ಹಿರಿಯ ನ್ಯಾಯವಾದಿ ಶಾಂತರಾಮ್ ಶೆಟ್ಟಿ ಅವರು, ಆರೋಪಿಗಳನ್ನು ಖಾಸಗಿ ವಾಹನದಲ್ಲಿ ಕರೆತರುವ ಪದ್ದತಿ ಇಲ್ಲದಿದ್ದರೂ, ಹಾಗೆ ಮಾಡಬಾರದು ಎಂಬ ನಿಯಮ ಇಲ್ಲ. ಆದರೇ ಅದಕ್ಕೆ ಸಕಾರಣ ಬೇಕು. ಜೈಲಿನಲ್ಲಿ ವಾಹನ ಇಲ್ಲ, ಅಥವಾ ಆರೋಪಿ ಜೈಲಿನ ವಾಹನದಲ್ಲಿ ಪ್ರಯಾಣಿಸುವ ಸ್ಥಿತಿಯಲ್ಲಿಲ್ಲ ಇತ್ಯಾದಿ ಕಾರಣಗಳಿದ್ದಾಗ ಖಾಸಗಿ ವಾಹನದಲ್ಲಿ ಕರೆ ತರಬಹುದು. ಅದರ ಖರ್ಚುವೆಚ್ಚಗಳನ್ನು ಆರೋಪಿಯೇ ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಆದರೇ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರು, ಮಂಗಳೂರು ಜೈಲಿನ ಅಧಿಕಾರಿಗಳ ಈ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ಆರೋಪಿಗಳನ್ನು ಕರೆದುಕೊಂಡು ಬರುವಂತಿಲ್ಲ. ಇದಕ್ಕೆ ಮಂಗಳೂರು ಜೈಲಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಹೇಳಿದ್ದಾರೆ.

ಮಾಧ್ಯಮ ಗಳಲ್ಲಿ ಪ್ರಸಾರವಾದ ವರದಿಗಳ ಹಿನ್ನೆಲೆಯಲ್ಲಿ ಡಿವೈಎಸ್ಪಿ ಕುಮಾರಸ್ವಾಮಿ ಅವರಿಂದ ಪ್ರಾಥಮಿಕ ತನಿಖೆ ನಡೆಸಿದ್ದು, ಪೊಲೀಸ್ ಸಿಬ್ಬಂದಿ ಗಳ ಕರ್ತವ್ಯಲೋಪ ಕಂಡುಬಂದಿದೆ. ಕೊಲೆ ಪ್ರಕರಣದ ಅರೋಪಿಗಳನ್ನು ಸೂಕ್ತ ರೀತಿಯಲ್ಲಿ ನ್ಯಾಯಾಲಯಕ್ಕೆ ಕರೆತರುವ ಕರ್ತವ್ಯ ದಲ್ಲಿ ವಿಫಲರಾದ 3 ಮಂದಿ ಪೋಲಿಸ್ ಸಿಬ್ಬಂದಿ ಗಳನ್ನು ಉಡುಪಿ ಎಸ್ಪಿ ಸಂಜೀವ್ ಪಾಟೀಲ್ ಅಮಾನತಗೊಳಿಸಿದ್ದಾರೆ

 

 


Spread the love

Exit mobile version