ಮಂಗಳೂರಲ್ಲಿ 4 ಕೋಟಿ ರೂ ವೆಚ್ಚದಲ್ಲಿ 8 ಕೆರೆಗಳ ಅಭಿವೃದ್ಧಿ : ಶಾಸಕ ಜೆ.ಆರ್.ಲೋಬೊ

Spread the love

ಮಂಗಳೂರಲ್ಲಿ 4 ಕೋಟಿ ರೂ ವೆಚ್ಚದಲ್ಲಿ 8 ಕೆರೆಗಳ ಅಭಿವೃದ್ಧಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು:  ಮಂಗಳೂರು ನಗರದಲ್ಲಿರುವ ಕೆರೆಗಳ ಪೈಕಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ 8 ಕೆರೆಗಳನ್ನು ಜಲಸಂಪನ್ಮೂಲ ಮತ್ತು ಅಂತರಜಲವೃದ್ದಿ ಅಭಿಯಾನ ಆರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಇಂದು 5  ಕೆರೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಈ ಕೆರೆಗಳನ್ನು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಪಡೆದು ಪುನರ್ ಬಳಕೆ ಮಾಡಲಾಗುತ್ತಿದೆ ಎಂದರು.

ಒಂದು ಕಾಲದಲ್ಲಿ ಅತಿಯಾದ ನೀರಿನ ಸಂಪನ್ಮೂಲ ಹೊಂದಿ ಸುಭಿಕ್ಷವಾಗಿದ್ದ ಕೆರೆಗಳು ಕಾಲಕ್ರಮೇಣ ನೀರಿನ ದುರ್ಬಳಕೆಯಿಂದ ಮತ್ತು ಜನರ ಅನಾಸಕ್ತಿಯಿಂದ ಮೂಲ ಕಳೆದುಕೊಂಡವು. ಈಗ ಈ ಕೆರೆಗಳನ್ನು ಪುನರ್ ಬಳಕೆ ಮಾಡಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.

ಜನರಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಅಂತರ್ಜಲವನ್ನು ಹೆಚ್ಚಿಸಿ ಅಗತ್ಯವಿದ್ದಾಗ ಜಾನುವಾರುಗಳಿಗೆ, ಜನರಿಗೆ ಕುಡಿಯಲು ಅನುಕೂಲವಾಗುವಂತೆ ಮಾಡಲಾಗುವುದು. ಕೆರೆಗಳ ಹೂಳು ತೆಗೆದು, ತಡೆಗೋಡೆಗಳನ್ನು ನಿರ್ಮಾಣ ಮಾಡಿ ಜನರು ನಿರಾತಂಕಾವಾಗಿ ಈ ನೀರನ್ನು ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುವುದು ಮೂಲ ಉದ್ದೇಶ. ಇದರೊಂದಿಗೆ ಇಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುವಂತೆ ಮಾಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ವಿವರಿಸಿದರು.

ಬೈರಾಡಿಕೆರೆ, ಗುಜ್ಜರಕೆರೆ, ಬಜಾಲ ಶಾಂತಿ ನಗರದಲ್ಲಿರುವ ಕುಂಬಳ ಕೆರೆ, ಕೆಂಬಾರ್ ಪ್ರಶಾಂತ ಭಾಗ್ ನಲ್ಲಿರುವ ಕೆರೆ, ನಿಡ್ಡೇಲ್ ಭಟ್ರಕಟ್ಟ ಬಳಿ ಶಾಶ್ವತ ವಡ್ಡು ನಿರ್ಮಾಣ, ಕದ್ರಿ ಜೋಗಿ ಮಠದ ಬಳಿ ಇರುವ ಕೆರೆ, ಕದ್ರಿ ಕೈಬಟ್ಟಲಿನ ಡಾಕ್ಟರ್ಸ್ ಕಾಲನಿ ಕೆರೆಗಳು ಆರಂಭದಲ್ಲಿ ಪುನರುಜ್ಜೀವನವಾಗಲಿವೆ ಎಂದರು.

ಮೊದಲು ಕೆರೆಗಳ ವಿಸ್ತೀರ್ಣವನ್ನು ಗುರುತು ಮಾಡಬೇಕು. ಎಲ್ಲೆಲ್ಲಿ ಒತ್ತುವರಿಯಾಗಿವೆಯೋ ಅವುಗಳನ್ನು ತೆರವು ಮಾಡಬೇಕು ಎಂದ ಅವರು ಕೆರೆಗಳ ನೀರನ್ನು  ಕಲುಷಿತ ಮಾಡದಂತೆ ಎಚ್ಚರಿಕೆ ನೀಡುವಂತೆಯೂ ತಿಳಿಸಿದರು.

ಈ ಕೆರೆಗಳನ್ನು ಅಧಿಕಾರಿಗಳು ಇನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಿ ಆ ನೀರನ್ನು ಸಾರ್ವಜನಿಕರು ಬಳಕೆ ಮಾಡವಂತೆ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕದ್ರಿ ಜೋಗಿ ಮಠದ ನಿರ್ಮಲಾನಂದ ಸ್ವಾಮೀಜಿ, ಕಾರ್ಪೊರೇಟರ್ ಸುಮಯ್ಯ, ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಕಾರ್ಪೊರೇಟರ್ ಗಳಾದ ಪ್ರಕಾಶ್, ಡಿ.ಕೆ.ಅಶೋಕ್ ಕುಮಾರ್, ಅಶ್ರಫ್ ಬಜಾಲ್, ಎ.ಪಿ.ಎಂಸಿ ಸದಸ್ಯ ಭರತೇಶ್, ಕೆ ಎಸ್ ಆರ್ ಟಿ ಸಿ ನಿರ್ದೇಶಕ ಟಿ.ಕೆ.ಸುಧೀರ್,ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಡೆನ್ನಿಸ್, ಕೃತಿನ್, ಅಹ್ಮದ್ ಬಾವಾ ಹಾಗೂ ಸಣ್ಣ ನಿರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love