ಮಂಗಳೂರಿಗೆ ಪ್ರಧಾನಿ: ಬಿಗಿ ಬಂದೋಬಸ್ತ್, ವಾಹನ ಪಾರ್ಕಿಂಗ್, ಸಂಚಾರದಲ್ಲಿ ಬದಲಾವಣೆ
ಮಂಗಳೂರು : ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಎ.13ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ನಗರಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ವಾಹನ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಐವರು ಎಸ್ಪಿ/ಡಿಸಿಪಿ, 10 ಡಿವೈಎಸ್ಪಿ/ಎಸಿಪಿ, 36 ಪೊಲೀಸ್ ಇನ್‌ಸ್ಪೆಕ್ಟರ್, 67 ಪಿಎಸ್ಸೈ, 147 ಎಎಸ್ಸೈ, 1,207 ಹೆಡ್ ಕಾನ್‌ಸ್ಟೇಬಲ್/ಪಿ.ಸಿ. ಸೇರಿದಂತೆ ಒಟ್ಟು 1472 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಇದಲ್ಲದೆ 92 ಎಚ್.ಜಿ., 5 ಕೆಎಸ್.ಆರ್.ಪಿ. ತುಕಡಿ, 19 ಸಿ.ಎ.ಆರ್ ತುಕಡಿ ಹಾಗೂ 2 ಸಿ.ಆರ್.ಪಿ.ಎಫ್. ತುಕಡಿಗಳ ಅಧಿಕಾರಿ ಮತ್ತು ಸಿಬ್ಬಂದಿ ಅಂದು ಕರ್ತವ್ಯದಲ್ಲಿರುವರು. ಕಾರ್ಯಕ್ರಮ ನಡೆಯುವ ಸ್ಥಳ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪ್ರಧಾನಿ ಸಂಚರಿಸುವ ಸ್ಥಳಗಳ ತಪಾಸಣೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ನೆಹರೂ ಮೈದಾನದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಹೋಟೆಲ್/ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿ ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ತೀವ್ರ ತಪಾಸಣೆ ಮತ್ತು ನಿಗಾ ವಹಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರ, ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ
ಎ.13ರಂದು ಬೆಳಗ್ಗೆ 8ರಿಂದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ನಿರ್ಗಮಿಸುವ ವರೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ನಗರದ ನೆಹರೂ ಮೈದಾನದ ವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅದೇರೀ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನಗಳಿಗೆ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದೆ.
ಉಡುಪಿ-ಮುಲ್ಕಿ-ಸುರತ್ಕಲ್ ಹಾಗೂ ಕಟೀಲು-ಬಜ್ಪೆ-ಕಾವೂರು-ಕೂಳೂರು-ಕೊಟ್ಟಾರಚೌಕಿ ಮುಖಾಂತರ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಕರಾವಳಿ ಉತ್ಸವ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ ಮತ್ತು ಕೂಳೂರು ಗೋಲ್ಡ್ ಫಿಂಚ್ ಸಿಟಿ ಗ್ರೌಂಡ್ ನಲ್ಲಿ ಹಾಗೂ ಕಾರುಗಳಿಗೆ ಮಣ್ಣಗುಡ್ಡೆ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕಾರ್ಕಳ-ಮೂಡುಬಿದಿರೆ-ಸುಳ್ಯ-ಪುತ್ತೂರು-ಬೆಳ್ತಂಗಡಿ-ಬಂಟ್ವಾಳ-ಬಿ.ಸಿ.ರೋಡ್‌ನಿಂದ ನಂತೂರು ಮೂಲಕ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಬಂಟ್ಸ್ ಹಾಸ್ಟೆಲ್ ನ ರಾಮಕೃಷ್ಣ ಶಾಲಾ ಮೈದಾನ, ಮಲ್ಲಿಕಟ್ಟೆಯ ಕದ್ರಿ ಮೈದಾನ, ಪದವು ಪ್ರೌಢಶಾಲಾ ಮೈದಾನ ಮತ್ತು ಆಯಗ್ನೆಸ್ ಶಾಲಾ ಮೈದಾನ ಹಾಗೂ ಕಾರುಗಳಿಗೆ ಬಲ್ಮಠದ ಶಾಂತಿ ನಿಲಯ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾಸರಗೋಡು, ಉಪ್ಪಳ, ಉಳ್ಳಾಲ, ಕೊಣಾಜೆ, ದೇರಳಕಟ್ಟೆ, ತೊಕ್ಕೊಟ್ಟಿನಿಂದ ಪಂಪ್‌ವೆಲ್-ಕಂಕನಾಡಿ-ಮಂಗಳಾದೇವಿ ಮುಖಾಂತರ ನಗರ ಪ್ರವೇಶಿಸುವ ವಾಹನಗಳ ಪೈಕಿ ಬಸ್ಸುಗಳಿಗೆ ಎಮ್ಮೆಕೆರೆ ಮೈದಾನ ಮತ್ತು ನಂದಿಗುಡ್ಡೆಯ ವಾಮನ ನಾಯ್ಕೆ ಮೈದಾನ ಹಾಗೂ ಕಾರುಗಳಿಗೆ ಮೋರ್ಗನ್ಸ್ ಗೇಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.