ಮಂಗಳೂರಿನಲ್ಲಿ ಡಿಸೆಂಬರ್ 17ರಿಂದ 23ರವರೆಗೆ ರಾಜ್ಯಮಟ್ಟದ ಜಾಂಬೂರೇಟ್
ಮಂಗಳೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಮೂರು ವರ್ಷಗಳಿಗೊಮ್ಮೆ ಏರ್ಪಡಿಸುವ ರಾಜ್ಯಮಟ್ಟದ ಮಹಾಮೇಳ ‘ಜಾಂಬೂರೇಟ್’ ಡಿಸೆಂಬರ್ 17ರಿಂದ 23ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ.
ಈ ಕುರಿತು ಪೂರ್ವಭಾವಿ ಸಭೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಸಚಿವರು ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಾಂಬೂರೇಟ್ ಮಂಗಳೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಕಲ ನೆರವು ನೀಡಲಿದೆ ಎಂದರು. ಧರ್ಮ, ವರ್ಣ, ಲಿಂಗ ಭೇದಗಳಿಲ್ಲದೇ ಬಾರತೃತ್ವ ಸಂದೇಶ ಬೀರುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯು ಜಗತ್ತಿನ ಅತ್ಯಂತ ದೊಡ್ಡ ಕಾರ್ಯಕ್ರಮಗಳಲ್ಲೊಂದಾಗಿದೆ. ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಂಸ್ಥೆಗೆ ಪೂರಕವಾಗಿ ನಿಲ್ಲಲಿದೆ ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಮಂಗಳೂರಿನಲ್ಲಿ ರಾಜ್ಯಮಟ್ಟದ 28ನೇ ಜಾಂಬೂರೇಟ್ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 10 ಸಾವಿರಕ್ಕೂ ಮಿಕ್ಕಿ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೇ ನೆರೆ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಪ್ರತಿನಿಧಿಗಳು ಪಾಲ್ಗೊಳ್ಳಿದ್ದಾರೆ. ಸಮ್ಮೇಳನದ ವಿವಿಧ ಸಿದ್ಧತೆಗಳಿಗೆ ಜಿಲ್ಲಾಡಳಿತವು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.
ಜಾಂಬೂರೇಟ್ ಸಮ್ಮೇಳನಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಇದಲ್ಲದೇ, ಸರಕಾರದ ನೆರವು ಸೇರಿದಂತೆ ಸಮ್ಮೇಳನದ ಆರ್ಥಿಕ ಸಂಪನ್ಮೂಲಕ್ಕೆ ಜಿಲ್ಲಾಡಳಿತ ಕೈಜೋಡಿಸಲು ಪಿಜಿಆರ್ ಸಿಂಧ್ಯಾ ಮನವಿ ಮಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ. ಮೋಹನ್ ಮಾತನಾಡಿ, 27 ವರ್ಷಗಳ ಬಳಿಕ ಮಂಗಳೂರಿನಲ್ಲಿ ಜಾಂಬೂರೇಟ್ ನಡೆಯುತ್ತಿದೆ. ನಗರದ ಕೂಳೂರು ರಾಷ್ಟ್ರೀಯ ಹೆದ್ದಾರಿ ತಾಗಿಕೊಂಡು ಇರುವ ಮೈದಾನದಲ್ಲಿ ಡಿಸೆಂಬರ್ 17ರಿಂದ 23ರವರೆಗೆ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನವನ್ನು ಸ್ಮರಣೀಯವಾಗಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಪ್ರತಿಭಾ ಪ್ರದರ್ಶನ, ಸ್ಕೌಟ್ಸ್ ಮತ್ತು ಗೈಡ್ಸ್ ವಸ್ತು ಪ್ರದರ್ಶನ, ಸಾಹಸಮಯ ಚಟುವಟಿಕೆಗಳು, ಪಥ ಸಂಚಲನ, ಆಹಾರ ಮೇಳ, ಯುವ ಸಮಾವೇಶ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳು 1 ವಾರ ನಡೆಯಲಿದೆ. ಸಮ್ಮೇಳನಕ್ಕೆ ಅಂದಾಜು ರೂ.3 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಡಳಿತ ಸಮ್ಮೇಳನಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಸಕ ಜೆ.ಆರ್.ಲೋಬೋ, ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.