ಮಂಗಳೂರಿನಲ್ಲಿ ನಡೆದ ಗಲಭೆಗೆ ಕಾಂಗ್ರೇಸ್ ಪಕ್ಷವೇ ಕಾರಣ – ಶಾಸಕ ಕಾಮತ್
ಮಂಗಳೂರು : ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಮಂಗಳೂರಿನಲ್ಲಿ ನಡೆದ ಗಲಭೆಗೆ ಕಾಂಗ್ರೇಸ್ ಪಕ್ಷವೇ ನೇರ ಕಾರಣ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.ಮಾಜಿ ಸಚಿವ ಯು.ಟಿ ಖಾದರ್ ಅವರು ಪ್ರತಿಭಟನಾ ಸಭೆಯಲ್ಲಿ ಕರ್ನಾಟಕಕ್ಕೆ ಬೆಂಕಿ ಹಾಕುವ ಮಾತನ್ನು ಹೇಳುವ ಮೂಲಕ ಗಲಭೆ ನಡೆಸಲು ಪರೋಕ್ಷವಾಗಿ ಪ್ರಚೋದಿಸಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಘಟನೆಗೆ ಪೂರಕವೆಂಬಂತೆ ಕಾಂಗ್ರೇಸಿನ ರಾಜ್ಯ ನಾಯಕರು ಹಾಗೂ ಮಂಗಳೂರಿನ ಕಾಂಗ್ರೇಸ್ ನಾಯಕರ ಹೇಳಿಕೆಗಳು ಒಂದೇ ತೆರನಾಗಿದೆ. ಕಾಂಗ್ರೇಸ್ ನಾಯಕರು ಈ ಕಾಯ್ದೆಯ ಕುರಿತು ಅರಿತು,ಜನರಿಗೂ ಕೂಡ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಕಾಂಗ್ರೇಸ್ ನಾಯಕರು ನೇರವಾಗಿ ಬೆಂಕಿ ಹಚ್ಚುವ ಮಾತನಾಡುವ ಮೂಲಕ ಸಾಮರಸ್ಯಕ್ಕೆ ಕೊಳ್ಳಿಯಿಟ್ಟಿದ್ದಾರೆ ಎಂದು ಶಾಸಕ ಕಾಮತ್ ಆರೋಪಿಸಿದ್ದಾರೆ.
ದೇಶದೊಳಗೆ ಅಕ್ರಮವಾಗಿ ನುಸುಳಿ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿರುವ ವಲಸಿಗರಿಗೆ ಮಾತ್ರ ಈ ಕಾಯ್ದೆಯಿಂದ ತೊಂದರೆಯಾಗಲಿದೆ. ದೇಶದ ಭದ್ರತೆಯ ಹಿತ ದೃಷ್ಠಿಯಿಂದ ಅಕ್ರಮವಾಗಿ ನುಸುಳುಕೋರರನ್ನು ತಡೆಯುವ ಅನಿವಾರ್ಯತೆ ಇದೆ. ಇದನ್ನು ಈ ಹಿಂದಿನ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಕೂಡ ಒಪ್ಪಿಕೊಂಡಿದ್ದರು. ಆದರೆ ರಾಜಕೀಯ ದುರುದ್ಧೇಶದಿಂದ ಕಾಂಗ್ರೇಸ್ ಹೀನ ಕೃತ್ಯಕ್ಕೆ ಇಳಿದಿದೆ. ಅಸ್ಸಾಂ ಸಮಸ್ಯೆಯು ಪೂರ್ತಿ ದೇಶಕ್ಕೆ ಅನ್ವಯಿಸುವುದಿಲ್ಲ. ಅಸ್ಸಾಮ್ ನಲ್ಲಿ ನುಸುಳುವಿಕೆಯ ಸಮಸ್ಯೆ ಸುಧೀರ್ಘ ಕಾಲದಿಂದಲೂ ಇದೆ. ಈ ಕಾರಣದಿಂದ ರಾಜೀವ್ ಗಾಂಧಿ ಸರಕಾರ 1975ರಲ್ಲಿ ಒಪ್ಪಂದ ಮಾಡಿಕೊಂಡು 1971 ಮಾರ್ಚ್ 25ನ್ನು “ಕಟ್ ಆಫ್ ಡೇಟ್” ಎಂದು ಘೋಷಿಸಿತ್ತು. ಈ ಬಗ್ಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಕಾಯ್ದೆ ಅಂಗೀಕರಿಸುವಂತೆ ಮನವಿ ಮಾಡಿದ್ದರು. ಕಾಂಗ್ರೇಸಿನ ಈ ಎರಡು ಮಾಜಿ ಪ್ರಧಾನಿಗಳು ಅಂದು ಮಾಡಿದ್ದು ಸರಿಯಾಗಿದ್ದಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವುದು ಸರಿಯಲ್ಲವೇ ? ಕಾಂಗ್ರೇಸಿನ ನಾಯಕರು ಈಗ ಈ ರೀತಿ ಕಾಯ್ದೆಗೆ ವಿರೋಧಿಸುತ್ತಿದ್ದು ಅವರ ನಾಯಕರ ನಿಲುವನ್ನು ವಿರೋಧಿಸುತ್ತಿರುವುದು ಎಷ್ಟು ಸರಿ.ಸದ್ಯ ಅಸ್ಸಾಮಿನಲ್ಲಿ ನಡೆಯುವ ಪ್ರಕ್ರಿಯೆಯು ಸುಪ್ರಿಂ ಕೋರ್ಟಿನ ಸೂಚನೆಯಂತೆ ನಡೆಯುತ್ತಿದೆ. ಹಾಗಾಗಿ ಯಾರೂ ಕೂಡ ಪ್ರಚೋದನೆಗೆ ಒಳಗಾಗದೆ ಶಾಂತ ರೀತಿಯಲ್ಲಿ ವಾಸ್ತವಿಕ ಸತ್ಯವನ್ನು ಅರಿಯುವ ಪ್ರಯತ್ನ ಮಾಡೋಣವೆಂದು ಶಾಸಕ ಕಾಮತ್ ವಿನಂತಿಸಿದ್ದಾರೆ.