Home Mangalorean News Kannada News ಮಂಗಳೂರಿನಲ್ಲಿ ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಮಂಗಳೂರಿನಲ್ಲಿ ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ

Spread the love

ಮಂಗಳೂರಿನಲ್ಲಿ ಸನಾತನ ಸಂಸ್ಥೆಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಮಂಗಳೂರು: ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಗುರುಪೂಜೆ ಹಾಗೂ ಸಾಯಂಕಾಲ ಸಭಾ ಕಾರ್ಯಕ್ರಮ ನೆರವೇರಿತು.

ಬೆಳಿಗ್ಗೆ ಆದಿಗುರು ಮಹರ್ಷಿ ವ್ಯಾಸರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ಗುರುಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಶ್ರೀ. ವೇಣು ಗೋಪಾಲ ರಾಮ ಮತ್ತು ಸೌ. ಪರಮೇಶ್ವರಿ ಇವರು ಮಾಡಿದರು. ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ ಭಕ್ತರಾಜ ಮಹಾರಾಜರ ಪ್ರತಿಮೆಗೆ ಆರತಿ ಬೆಳಗಲಾಯಿತು. ಗುರುಪೂಜೆಯ ಪೌರೋಹಿತ್ಯವನ್ನು ಸಾಧಕರಾದ ಶ್ರೀ. ಉಮೇಶ ಆಚಾರ್ಯ ಇವರು ವಹಿಸಿದ್ದರು.

ಗುರುಪೂಜೆಯ ನಂತರ ಸನಾತನ ಸಂಸ್ಥೆಯ ವಕ್ತಾರರಾದ ಸೌ. ಮಂಜುಳಾ ಗೌಡ ಇವರು ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಸಂದೇಶ ವಾಚನವನ್ನು ಮಾಡಿದರು. ನಂತರ ಅವರು ಉಪಸ್ಥಿತ ಸಾಧಕ ಬಂಧುಗಳು, ಗುರುಭಕ್ತರಿಗೆ ಗುರು-ಶಿಷ್ಯ ಪರಂಪರೆಯ ಮಹತ್ವದ ಕುರಿತಾಗಿ ಮಾರ್ಗದರ್ಶನ ಮಾಡುತ್ತಾ, ಜಗತ್ತಿಗೇ ಹಿಂದೂ ಧರ್ಮ ನೀಡಿದ ಅಮೂಲ್ಯ ಜ್ಞಾನ ಅಪಾರ. ಹಿಂದೂ ಸಮಾಜಕ್ಕೆ ಒಂದು ಅಮೂಲ್ಯವಾದ ಪರಂಪರೆ ಲಭಿಸಿದೆ, ಅದುವೇ ಗುರುಪರಂಪರೆ ! ಆ ಗುರುಪರಂಪರೆಗೆ, ಗುರುಪೂರ್ಣಿಮೆಯ ದಿನದಂದು ಕೃತಜ್ಞತೆ ಸಲ್ಲಿಸುವ ಪರಂಪರೆಯು, ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಆ ಪರಂಪರೆಯನ್ನು ಕಾಪಾಡುವ ಹಾಗೂ ಸಂವರ್ಧನೆಯ ಉದ್ದೇಶದಿಂದ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಸಮವಿಚಾರಿ ಸಂಘಟನೆಗಳು ಈ ಬಾರಿ ದೇಶಾದ್ಯಂತ ೧೦೯ ಸ್ಥಳಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ಆಯೋಜಿಸಲಾಗಿದೆ ಎಂದರು.

ಗುರುಪೂರ್ಣಿಮೆಯ ನಿಮಿತ್ತ ಸಾಯಂಕಾಲ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತ ಧರ್ಮಪ್ರೇಮಿಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಜಯ ರೇವಣ್ಕರ್, ಪುತ್ತೂರಿನ ಸ್ವಚ್ಚ ಟೀಂ ಪುತ್ತೂರಿನ ಸಂಯೋಜಕರು, ಖ್ಯಾತ ವಾಗ್ಮಿಗಳಾದ ಶ್ರೀಕೃಷ್ಣ ಉಪಾಧ್ಯಾಯ ಇವರು ವಿಷಯವನ್ನು ಮಂಡಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಜಯ ರೇವಣ್ಕರ್ ಇವರು ಜೀವನದಲ್ಲಿ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ಮಾತನಾಡುತ್ತಾ, ಇಂದು ಗುರುಪೂರ್ಣೆಮೆ. “ಗುರುಕೃಪಾ ಹಿ ಕೇವಲಮ್ ಶಿಷ್ಯಪರಮಮಂಗಲಮ್ |” “ಶಿಷ್ಯನ ಪರಮಮಂಗಲ, ಅಂದರೆ ಮೋಕ್ಷಪ್ರಾಪ್ತಿ, ಇದು ಕೇವಲ ಗುರುಕೃಪೆಯಿಂದಲೇ ಆಗಲು ಸಾಧ್ಯ.” ಯಾವಾಗ ಯಾವಾಗ ಧರ್ಮಕ್ಕೆ ಗ್ಲಾನಿ ಬಂದಿದೆಯೋ, ಆಗ ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಪ್ರತ್ಯಕ್ಷವಾಗಿ ಕಾರ್ಯವನ್ನು ಮಾಡಿದೆ. ಭಗವಾನ ಶ್ರೀಕೃಷ್ಣ-ಅರ್ಜುನ, ಆರ್ಯ ಚಾಣಕ್ಯ-ಚಂದ್ರಗುಪ್ತ, ಸಮರ್ಥ ರಾಮದಾಸಸ್ವಾಮಿ-ಛತ್ರಪತಿ ಶಿವಾಜಿ ಮಹಾರಾಜರು ಇದು ಅದರ ಕೆಲವು ಉದಾಹರಣೆಗಳಾಗಿವೆ. ಇಂದು ಸಹ ಧರ್ಮಕ್ಕೆ ಗ್ಲಾನಿ ಬಂದಿದೆ. ಇಂದಿನ ಧರ್ಮಸಂಸ್ಥಾಪನೆಯೆಂದರೆ ಭಾರತವನ್ನು ಅವನತಿಯತ್ತ ಕೊಂಡೊಯ್ದ ಸೆಕ್ಯುಲರ್ ಪ್ರಜಾಪ್ರಭುತ್ವಕ್ಕೆ ಪರ್ಯಾಯವೆಂದು ಆದರ್ಶ ರಾಜ್ಯವ್ಯವಸ್ಥೆಯುಕ್ತ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು.

“ಭಾರತೀಯ ಸಂವಿಧಾನವು “ಸೆಕ್ಯುಲರ್” ಆಗಿರುವುದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಅಸಾಧ್ಯ” ಎಂದು ಬುದ್ಧಿಜೀವಿಗಳು ಪ್ರಸಾರ ಮಾಡುತಿದ್ದಾರೆ. ಈ ಅಪಪ್ರಚಾರವನ್ನು ನಿಲ್ಲಿಸಲು ಅದರ ವಾಸ್ತವಿಕತೆಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

ಭಾರತೀಯ ಸಂವಿಧಾನದಲ್ಲಿನ “ಸೆಕ್ಯುಲರ್”ವಾದದ ವಿಷಯದಲ್ಲಿ ತಪ್ಪು ಅಭಿಪ್ರಾಯ ಮತ್ತು ವಾಸ್ತವಿಕತೆ : ಇಂದು “ಸೆಕ್ಯುಲರ್” ಶಬ್ದವನ್ನು ಸರಳವಾಗಿ “ಜಾತ್ಯತೀತ” ಎಂದು ಹೇಳಲಾಗುತ್ತದೆ. ಸಂವಿಧಾನಕ್ಕನುಸಾರ ಭಾರತ ಜಾತ್ಯತೀತವಾಗಿರುವುದರಿಂದ ಸಾರ್ವಜನಿಕ ಜೀವನದಲ್ಲಿ ಹಿಂದೂ ಧರ್ಮಕ್ಕೆ ಸ್ಥಾನ ಸಿಗುವುದೆಂದರೆ ಇದು ಜಾತ್ಯತೀತತೆಗೆ ಅಂದರೆ ಸಂವಿಧಾನದ ವಿರುದ್ಧ ಆಗಿದೆ” ಎಂದು ನಿರಂತರ ಅಪಪ್ರಚಾರ ಮಾಡಲಾಗುತ್ತದೆ. ನಿಜವಾಗಿ ನೋಡಿದರೆ ಭಾರತ ಸರಕಾರ ರಾಷ್ಟ್ರಪತಿಯವರ ಸಹಿಯೊಂದಿಗೆ ಪ್ರಕಾಶನ ಮಾಡಿದ ಭಾರತೀಯ ಸಂವಿಧಾನದ ಹಿಂದಿ ಆವೃತ್ತಿಯಲ್ಲಿ ಎಲ್ಲಿಯೂ “ಧರ್ಮನಿರಪೇಕ್ಷ” ಎಂಬ ಶಬ್ದವನ್ನು ಉಪಯೋಗಿಸಿಲ್ಲ. ಭಾರತದ ಸಂವಿಧಾನದಲ್ಲಿ ೪೨ ನೇ ತಿದ್ದುಪಡಿ ಮಾಡಿ ಸಂವಿಧಾನದಲ್ಲಿ ಸಮಾಜವಾದ, ಜಾತ್ಯತೀತ ಮತ್ತು ಗಣತಂತ್ರ ಇಂತಹ ಶಬ್ದಗಳನ್ನು ಸೇರಿಸಲಾಯಿತು. ನಾವು ವಾಸ್ತವ ಸ್ಥಿತಿಯನ್ನು ಅರಿತು ಧರ್ಮಾಧಿಷ್ಠಿತ ಹಿಂದೂರಾಷ್ಟ್ರದ ಸ್ಥಾಪನೆಗಾಗಿ ತಯಾರಾಗೋಣ, ಎಂದು ಕರೆ ನೀಡಿದರು.

ರಾಮಕೃಷ್ಣ ಮಿಷನ್ ನ ಸ್ವಚ್ಚ ಟೀಂ ಪುತ್ತೂರಿನ ಸಂಯೋಜಕರಾದ ಶ್ರೀಕೃಷ್ಣ ಉಪಾಧ್ಯಾಯ ಇವರು ಮಾತನಾಡುತ್ತಾ – ಸನಾತನ ಸಂಸ್ಥೆ ನಿರ್ಮಾಣ ಮಾಡಿದ ಈ ಗುರುಪೂರ್ಣಿಮೆಯ ಕಾರ್ಯಕ್ರಮ ಒಂದು ಭಾರತ ದರ್ಶನವಾಗಿದೆ. ವಿದೇಶಿಗಳಿಗೆ, ಭಾರತವು ಇಡೀ ವಿಶ್ವದ ಭೂಪಟದಲ್ಲಿನ ದೇವರ ಕೋಣೆಯಾಗಿದೆ. ಸನಾತನದವರು ನಮಸ್ಕಾರ ಎಂದು ಹೇಳಿದಾಗ ಮನಸ್ಸಿನಿಂದ ನಮಸ್ಕರಿಸುತ್ತಾರೆ ಎಂದು ಅನುಭವಕ್ಕೆ ಬರುತ್ತದೆ.
ಪ. ಪೂ. ಆಠವಲೆ ಅವರ ತಪಸ್ಸಿನ ಫಲವನ್ನು ಇಡೀ ಜಗತ್ತಿಗೆ ಹಂಚಿದರು. ಗುರುವಿನ ಪ್ರಾರ್ಥನೆ: ನಾನು ಮಾಡಿದ ಧ್ಯಾನದ ಫಲ ನನಗಲ್ಲ ಎಲ್ಲಾ ಸಾಧಕರಿಗೆ, ಹಿಂದೂ ರಾಷ್ಟ್ರಕ್ಕೆ ಸಿಗಲಿ.
ಸನಾತನ ಸಂಸ್ಥೆ ಯಾವುದೇ ವಿಷಯವನ್ನು ಮಂಡಿಸುವಾಗ, ಆಧಾರ ಸಹಿತ ಮಂಡಿಸುತ್ತದೆ. ಈ ಕಾರಣದಿಂದಾಗಿ ಅವರ ಮಾರ್ಗದರ್ಶನವು ಮನಮುಟ್ಟುವಂತಿರುತ್ತದೆ.
ಸನಾತನ ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂದು ಭಗವಂತನಲ್ಲಿ ಮನಸ್ಪೂರ್ವಕವಾಗಿ ಪ್ರಾರ್ಥಿಸಿದರು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಉತ್ಕೃಷ್ಟ ಅಡಿಗಲ್ಲನ್ನು ಹಾಕುವ ಕಾರ್ಯವನ್ನು ಸನಾತನ ಸಂಸ್ಥೆಯು ಮಾಡುತ್ತಿದೆ. ಇಂತಹ ಸಂಸ್ಥೆಯ ಮೇಲೆ ಅನಾಚಾರ, ಆರೋಪಗಳನ್ನು ಹಾಕುತ್ತಿದ್ದಾರೆ. ಅವರ ಆಶ್ರಮಕ್ಕೆ ಹೋಗಿ ಅವರ ಜೀವನಶೈಲಿಯನ್ನು ನೋಡಿದರೆ, ಅದು ಋಶಿ ಸದೃಶ್ಯ ಜೀವನವಾಗಿದೆ ಎಂದು ತಿಳಿಯುತ್ತದೆ. ಇಂತಹ ಸಂಸ್ಥೆಯ ರಕ್ಷಣೆಯನ್ನು ಮಾಡಿ ಅವರ ಮೇಲೆ ರಾಜಕೀಯ ಹಿತಾಸ್ಮೃತಿಯಿಂದಾಗುತ್ತಿರುವ ಆರೋಪಗಳಿಗೆ ಶ್ರೀಕೃಷ್ಣನ ಪಾಂಚಜನ್ಯದ ಧ್ವನಿಯು ಶೀಘ್ರಾತಿಶೀಘ್ರವಾಗಿ ಉತ್ತರಿಸಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮ ನಡೆದ ಸಭಾಗೃಹದಲ್ಲಿ ರಾಷ್ಟ್ರ-ಧರ್ಮ ಹಾಗೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು ; ಹಾಗೆಯೇ ಸನಾತನ ನಿರ್ಮಿತ ಧಾರ್ಮಿಕ ಗ್ರಂಥಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಏರ್ಪಡಿಸಲಾಗಿತ್ತು.

ದೇವರಮಂಟಪದಲ್ಲಿ ಪೂಜಾ ಸಾಮಾಗ್ರಿಗಳನ್ನು ಶಾಸ್ತ್ರಾನುಸಾರ ಹೇಗೆ ಜೋಡಿಸಬೇಕು ಎಂಬುದರ ಕುರಿತು ತಯಾರಿಸಲಾಗಿದ್ದ ಪೂಜಾ ಮಂಟಪ ಎಲ್ಲರ ಗಮನಸೆಳೆಯಿತು.

ಈ ಕಾರ್ಯಕ್ರಮದಲ್ಲಿ ಧ್ವನಿಚಿತ್ರ ಸಿ.ಡಿ. ಪ್ರದರ್ಶನ, ಪ್ರಥಮೋಪಚಾರದ ಅವಶ್ಯಕತೆಯನ್ನು ಪ್ರತ್ಯಕ್ಷಿಕೆಯ ಮೂಲಕ ತೋರಿಸಲಾಯಿತು. ಸ್ವಸಂರಕ್ಷಣೆಯ ಕೆಲವು ವಿಧಗಳನ್ನು ಸಹ ಮಾಡಿ ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಪ್ರೇಮಿಗಳಾದ, ಮಂಗಳೂರಿನ ಶಾಸಕರಾದ ಶ್ರೀ. ವೇದವ್ಯಾಸ್ ಕಾಮತ್, ಐ.ಸಿ. ಟಿವಿಯ ಶ್ರೀ. ಶ್ರೀನಿವಾಸ ಕಿಣಿ, ತುಳುನಾಡು ರಕ್ಷಣಾವೇದಿಕೆಯ ಮಹಿಳಾಧ್ಯಕ್ಷೆ ಸೌ. ಜ್ಯೋತಿ, ಶ್ರೀ. ದಯಾನಂದ ವಳಚ್ಚಿಲ್ ಮೊದಲಾದವರು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.


Spread the love

Exit mobile version