ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಭಟ್ಕಳಕ್ಕೆ ಹರಡಿದ ಕೊರೋನ
ಭಟ್ಕಳ: ಶುಕ್ರವಾರ ಎಲ್ಲರಿಗೂ ಶುಭವನ್ನು ತರುವ ವಾರ. ಆದರೆ ಭಟ್ಕಳಕ್ಕದು ಶುಭವಾಗದೆ 12 ಹೊಸ ಕೊರೋನಾ ಪ್ರಕರಣ ಪತ್ತೆಯಾದ ದಿನವಾಗಿ ಮಾರ್ಪಟ್ಟು ಇಡೀ ಉತ್ತರಕನ್ನಡ ಜಿಲ್ಲೆಗೆ ಅಶುಭವಾಗಿ ಪರಿಣಮಿಸಿದೆ. ಮಂಗಳೂರು ಫಸ್ಟ್ ನ್ಯುರೋ ಆಸ್ಪತ್ರೆಯಿಂದ 18ರ ಯುವತಿಯೊಂದಿಗೆ ಶಿಫ್ಟಾದ ಕೊರೋನಾ ಈಗ 12 ಮಂದಿಯನ್ನು ಅಕ್ರಮಿಸಿಕೊಂಡಿದೆ.
ಮೇ.5 ರಂದು 18 ವರ್ಷದ ಯುವತಿಗೆ ಕಾಣಿಸಿಕೊಂಡ ಕೊರೋನಾ, ಆಕೆಯ ಅಕ್ಕ, ಅಜ್ಜ, ಅಜ್ಜಿ, ಚಿಕ್ಕಮ್ಮ , ಇಬ್ಬರು ಗೆಳತಿಯರು ಸೇರಿದಂತೆ ಒಟ್ಟು ಇಬ್ಬರು ಪುರುಷರು, ಒಂಬತ್ತು ಮಹಿಳೆಯರು ಹಾಗೂ ಒಂದು ಮಗು(ಹೆಣ್ಣು) ವನ್ನ್ನು ತನ್ನ ತೆಕ್ಕೆ ಸೆಳೆದುಕೊಂಡಿದ್ದು ಭಟ್ಕಳವನ್ನು ಆತಂಕದಲ್ಲಿ ದೂಡಿದೆ.
ಭಟ್ಕಳದ ಓರ್ವ ಮಹಿಳೆ ತನ್ನ 5 ತಿಂಗಳ ಮಗುವಿನ ಆರೋಗ್ಯ ಹದಗೆಟ್ಟ ಕಾರಣ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದು ಆಕೆಯೊಂದಿಗೆ ಪತಿ ಮತ್ತು ತಂಗಿಯು ಜತೆಯಲ್ಲಿ ಹೋಗಿದ್ದು ಅಲ್ಲಿಂದ ಮರಳಿ ಭಟ್ಕಳಕ್ಕೆ ಬಂದ ಕೆಲವು ದಿನಗಳ ನಂತರ ಅಂದರೆ ಮೇ.1ರಂದು ತನ್ನ ತಂಗಿ ಗೆ ಆರೋಗ್ಯ ಸರಿಯಿಲ್ಲ ಎಂದು ಭಟ್ಕಳ ಆಸ್ಪತ್ರೆಗೆ ತಪಾಸಣೆಗೆ ಹೋದಾಗ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ರವಾನಿಸಿದ ವೈದ್ಯರಿಗೆ ಮೇ5 ರಂದು ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದ್ದು ನಂತರ ಆಕೆಯ ಕುಟುಂಬದ ಎಲ್ಲ ಸದಸ್ಯರನ್ನು ಕೊರೆಂಟೈನ್ ಮಾಡಿ ಎಲ್ಲರ ಗಂಟಲು ದ್ರವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಶುಕ್ರವಾರ ಆಕೆಯ ಕುಟುಂಬದ 12 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು ದೃಢಪಟ್ಟಿದೆ.