ಮಂಗಳೂರು: ಅಬಕಾರಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ 2014-15ನೇ ಸಾಲಿನಲ್ಲಿ ಪರವಾನಿಗೆ ಶುಲ್ಕ, ಅಬಕಾರಿ ಸುಂಕ ಹಾಗೂ ದಂಡ ಸೇರಿದಂತೆ ಒಟ್ಟು 1,388 ಕೋ.ರೂ. ಆದಾಯ ಸಂಗ್ರಹ ಮಾಡಿದೆ ಎಂದು ಅಬಕಾರಿ ಉಪ ಆಯುಕ್ತ ಜಾರ್ಜ್ ಪಿಂಟೊ ಹೇಳಿದರು.
ಅಬಕಾರಿ ಇಲಾಖೆಯ 2014-15ನೇ ಸಾಲಿನ ಸಾಧನೆಯನ್ನು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು 2014-15ನೇ ಸಾಲಿನಲ್ಲಿ ರಾಜ್ಯದ ಗುರಿ 1,3850 ಕೋ.ರೂ. ಆಗಿದ್ದು ಇದರಲ್ಲಿ 1,388 ಕೋ.ರೂ. ದ.ಕ. ಜಿಲ್ಲೆಯಲ್ಲಿ ಸಂಗ್ರಹವಾಗಿದೆ. ರಾಜ್ಯದಲ್ಲಿ 3ನೇ ಸ್ಥಾನದಲ್ಲಿದ್ದು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿದೆ ಎಂದರು.
ದ.ಕ. ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ 25,80,222 ಪೆಟ್ಟಿಗೆ ಮದ್ಯ ಮಾರಾಟವಾಗಿದ್ದು ಕಳೆದ ವರ್ಷದ ಸಾಧನೆಗೆ ಹೋಲಿಸಿದಲ್ಲಿ ಭಾರತೀಯ ತಯಾರಿಕೆ ಮದ್ಯಮಾರಾಟದಲ್ಲಿ ಶೇ. 7 ಹೆಚ್ಚಳವಾಗಿದೆ. ಈ ಸಾಲಿನಲ್ಲಿ 17,26,636 ಪೆಟ್ಟಿಗೆ ಬಿಯರ್ ಮಾರಾಟವಾಗಿದೆ. ಜಿಲ್ಲೆಯಲ್ಲಿ ಭಾರತೀಯ ತಯಾರಿಕಾ ಮದ್ಯ ಮತ್ತು ಬಿಯರ್ ಮಾರಾಟದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 973 ಕೋ.ರೂ. ರಾಜಸ್ವ ಸಂಗ್ರಹವಾಗಿದೆ . ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ 1 ಮದ್ಯ ಉತ್ಪಾದನಾ ಡಿಸ್ಟಿಲರಿ ಮತ್ತು ಬ್ರೆವರಿ ಹಾಗೂ ಇತರ ಮೂಲಗಳಿಂದ 340 ಕೋ.ರೂ. ರಾಜಸ್ವ ಸಂಗ್ರಹವಾಗಿದೆ ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ 153 ಚಿಲ್ಲರೆ ಮದ್ಯದಂಗಡಿ, 215 ಬಾರ್ ಸನ್ನದು, 41 ಬೋರ್ಡಿಂಗ್ ಮತ್ತು ಲಾಡಿjಂಗ್ ಸನ್ನದುಗಳು, 4 ಕ್ಲಬ್‌ಗಳು ಸೇರಿದಂತೆ ಒಟ್ಟು 446 ಸನ್ನದುಗಳಿವೆ.
ಗೂಡಂಗಡಿ ಹಾಗೂ ಮಾಂಸಹಾರಿ ಹೊಟೇಲ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಸೇವನೆ ಮಾಡುತ್ತಿರುವ ವಿರುದ್ಧ ಒಟ್ಟು 255 ಅಬಕಾರಿ ಪ್ರಕರಣಗಳನ್ನು ದಾಖಲು ಮಾಡಿ 682,500 ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ದಂಡ ವಸೂಲಾತಿಯಿಂದ 69,91,250 ರೂ. ಸಂಗ್ರಹವಾಗಿದೆ. ಮದ್ಯದಂಗಡಿಗಳಲ್ಲಿ ಸನ್ನದು (ಲೈಸೆನ್ಸ್) ಷರತ್ತು ಉಲ್ಲಂಘನೆಗೆ ಸಂಬಂಧಿಸಿದಂತೆ ಇಲಾಖಾ ವತಿಯಿಂದ ಮದ್ಯದ ಸನದುದಾರರ ವಿರುದ್ಧ 441 ಪ್ರಕರಣಗಳನ್ನು ದಾಖಲಿಸಲಾಗಿದ್ದು 63,08,750 ಮೊತ್ತದ ದಂಡ ವಸೂಲಿ ಮಾಡಲಾಗಿದೆ. ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ, ದಾಸ್ತಾನು ಇತ್ಯಾದಿ ಸಂಬಂಧಿಸಿದಂತೆ 14 ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಅಬಕಾರಿ ಇಲಾಖೆಯ ಸಿಎಲ್-5 ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಅಂದರೆ ಸಮಾರಂಭಗಳಲ್ಲಿ ಮದ್ಯವನ್ನು ವಿತರಿಸಲು ಸಿಎಲ್- 5 ಪರವಾನಿಗೆ ಪಡೆಯಬೇಕಾಗಿರುತ್ತದೆ. ಬಿಲ್ ಸಹಿತವಾಗಿ ಮನೆಯಲ್ಲಿ 4.6 ಲೀ. ಮದ್ಯ ಹಾಗೂ 2 ಬಾಕ್ಸ್ ಬಿಯರ್ ಇಡಬಹುದಾಗಿದ್ದು ಇದಕ್ಕೆ ಸಿಎಲ್ -5 ಪರವಾನಿಗೆ ಪಡೆಯಬೇಕಾಗಿಲ್ಲ. 2014-15ನೇ ಸಾಲಿನಲ್ಲಿ ಒಟ್ಟು 235 ಸಿಎಲ್-5 ಪರವಾನಿಗೆಗಳನ್ನು ವಿತರಿಸಲಾಗಿದೆ ಎಂದು ಜಾರ್ಜ್ ಪಿಂಟೊ ವಿವರಿಸಿದರು.
ದ.ಕನ್ನಡ ಜಿಲ್ಲೆಯಲ್ಲಿ ಕಳ್ಳಭಟ್ಟಿ ಕೇಂದ್ರಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದ್ದು ಕಳ್ಳಭಟ್ಟಿ ಮುಕ್ತ ಜಿಲ್ಲೆಯಾಗಿ ಘೋಷಿಸಲ್ಪಟ್ಟಿದೆ. ಅದಾಗ್ಯೂ ಇಲಾಖಾ ವತಿಯಿಂದ ಕೆಲವೊಂದು ಸಂಶಯಾಸ್ಪದ ಸ್ಥಳಗಳನ್ನು ವಿಚಕ್ಷಣೆಯಲ್ಲಿಟ್ಟು ನಿರಂತರ ನಿಗಾ ಇರಿಸಲಾಗಿರುತ್ತದೆ ಎಂದು ಜಾರ್ಜ್‌ಪಿಂಟೋ ತಿಳಿಸಿದರು.
ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್, ನಿರೀಕ್ಷಕ ರತ್ನಾಕರ ರೈ ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯಲ್ಲಿ ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಮದ್ಯದಂಗಡಿಗಳು ಕಮ್ಮಿ ಇದ್ದು ಮದ್ಯಮಾರಾಟ ಮಾತ್ರ ಹೆಚ್ಚಿದೆ. ಮದ್ಯದಂಗಡಿಗಳ ಪೈಕಿ ಒಟ್ಟು ಶೇ. 67ರಷ್ಟು ಮದ್ಯದಂಗಡಿಗಳು ನಗರ ಪ್ರದೇಶದಲ್ಲಿದ್ದು ಶೇ. 48ರಷ್ಟು ಮದ್ಯ ಮಾರಾಟವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ. 33ರಷ್ಟು ಮದ್ಯದಂಗಡಿಗಳಿದ್ದು ಶೇ. 52ರಷ್ಟು ಮದ್ಯ ಮಾರಾಟವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕಡಿಮೆ/ ಮಧ್ಯಮ ಬೆಲೆಯ ಮದ್ಯ ಹೆಚ್ಚು ಮಾರಾಟವಾಗುತ್ತಿದ್ದರೆ ನಗರ ಪ್ರದೇಶದಲ್ಲಿ ಮಧ್ಯಮ/ ಹೆಚ್ಚಿನ ಬೆಲೆಯ ಮದ್ಯ ಮಾರಾಟವಾಗುತ್ತಿದೆ ಎಂದು ಜಾರ್ಜ್ ಪಿಂಟೋ ವಿವರಿಸಿದರು.
ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಸಾರಾಯಿ ಗುತ್ತಿಗೆ ಪದ್ಧತಿ ಇದ್ದ ಅವಧಿಯಲ್ಲಿ ಗುತ್ತಿಗೆದಾರರಿಂದ ಅಬಕಾರಿ ಇಲಾಖೆಗೆ ಪಾವತಿಸಲು ಬಾಕಿ ಇರುವ ಮೊತ್ತವನ್ನು ವಸೂಲಿ ಮಾಡಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದ್ದು ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ. ಹಲವಾರು ವರ್ಷಗಳಿಂದ ವಸೂಲಾಗದೆ ಬಾಕಿ ಉಳಿದಿರುವ ಹಾಗೂ ವಸೂಲಾತಿ ಅಸಾಧ್ಯವೆಂದು ಪರಿಗಣಿಸಲಾದ 9 ಪ್ರಕರಣಗಳಲ್ಲಿ 25 ಲಕ್ಷ ರೂ. ಸಂಗ್ರಹಿಸಿಲಾಗಿದೆ ಎಂದು ಜಾರ್ಜ್ ಪಿಂಟೋ ವಿವರಿಸಿದರು.