ಮಂಗಳೂರು: ಅಂತಾರಾಜ್ಯ ಯುವ ವಿನಿಮಯ – ಸಂವಾದ ಕಾರ್ಯಕ್ರಮ
ಮಂಗಳೂರು : ಭಾರತ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೆನೆಪೋಯಾ ವಿಶ್ವವಿದ್ಯಾನಿಲಯಯದ ಸಹಕಾರದೊಂದಿಗೆ ಜನವರಿ 24 ರಿಂದ 27 ರವರೆಗೆ ಏಕ್ ಭಾರತ್ ಶ್ರೇಷ್ಠ ಭಾರತ್ ಕರ್ನಾಟಕ ಮತ್ತು ಉತ್ತರಾಖಂಡ್ ಕಾರ್ಯಕ್ರಮದ ಅಂಗವಾದ ಸಂವಾದ ಕಾರ್ಯಕ್ರಮವು ಸೋಮವಾರದಂದು ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉತ್ತರಖಂಡ್ ನೆಹರು ಯುವ ಕೇಂದ್ರದ ಯುವಕ ಮಂಡಲ ಹಾಗೂ ಯುವತಿ ಮಂಡಲಗಳಿಂದ ಆಗಮಿಸಿದ್ದ ಸುಮಾರು 50 ಪ್ರತಿನಿಧಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ಭಾಂದವ್ಯವನ್ನು ಬಲಪಡಿಸುವ ಮತ್ತು ಇಲ್ಲಿನ ಸಂಸ್ಕøತಿ, ಭಾಷೆ, ಜೀವನ ಶೈಲಿ, ಶೈಕ್ಷಿಣಿಕ ಕ್ಷೇತ್ರ ಪ್ರತಿಯೊಂದು ವಿಷಯಗಳನ್ನು ಅರಿತು ಕಲಿಯುವ ಕಾರ್ಯಕ್ರಮವಾಗಿದೆ.
ಸಮುದ್ರ ಕಿನಾರೆಯಲ್ಲಿರುವ ಮಂಗಳೂರಿನ ಸೌಂದರ್ಯವನ್ನು ಉತ್ತರಾಖಂಡ್ ಯುವಕರು ಎಳೆ ಎಳೆಯಾಗಿ ವಿಸ್ತರಿಸಿದರು. ಸಂವಾದದಲ್ಲಿ ಉತ್ತರಾಖಂಡ್ ನೆಹರು ಯುವ ಕೇಂದ್ರದ ಅನೂಪ್ ಎಂಬವರು ಕನ್ನಡ ಜನಪದ ಹಾಡು “ ಸೋಜುಗದ ಸೂಜಿ ಮಲ್ಲಿಗೆ” ಹಾಡನ್ನು ಹಾಡಿದರು. ಇನ್ನೋರ್ವ ಸದಸ್ಯೆ ಜ್ಯೋತಿ ಎಂಬವರು ಅಲ್ಲಿನ ಉಡುಗೆಯನ್ನು ತೊಟ್ಟು, ಆ ಉಡುಗೆಯ ಮಹತ್ವವನ್ನು ತಿಳಿಸಿದರು.
ಉತ್ತರಾಖಂಡ್ ರಾಜ್ಯದಿಂದ ಆಗಮಿಸಿದ ಪ್ರತಿನಿಧಿಗಳು ದ.ಕ ಜಿಲ್ಲೆಯಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಆ ಸ್ಥಳಗಳ ಕುರಿತು ಮತ್ತು ಜಿಲ್ಲೆಯಲ್ಲಿನ ಆಹಾರ ಪದ್ಧತಿಗಳ ಕುರಿತು ಉತ್ತಮ ಸ್ಪಂದನೆ ನೀಡಿದರು.
ಪ್ರತಿಯೊಬ್ಬ ಸದಸ್ಯರು ಉತ್ಸುಕತೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರವರ ಅನುಭವಗಳನ್ನು ಹಂಚಿಕೊಂಡರು. ನಾಲ್ಕು ದಿನಗಳ ಜಿಲ್ಲಾ ಪ್ರವಾಸಲದಲ್ಲಿರುವ ಈ ತಂಡವು ಕುದ್ರೋಳಿ ದೇವಸ್ಥಾನ, ಉಳ್ಳಾಲ ದರ್ಗಾ, ಅಲೋಸಿಯಸ್ ಚಾಪೆಲ್, ಅತ್ತೂರು ಚರ್ಚ್ ಹಾಗೂ ಜಿಲ್ಲೆಯ ಕಡಲ ತೀರಗಳಿಗೆ ಭೇಟಿ ನೀಡಿತು.
ಭಾನುವಾರ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿತಲ್ಲದೇ, ಅಲ್ಲಿನ ಯಕ್ಷಗಾನ ಅಧ್ಯಯನ ಕೇಂದ್ರಕ್ಕೂ ಭೇಟಿ ನೀಡಿ, ಮಾಹಿತಿ ಪಡೆಯಿತು. ¸
ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ಭೇಟಿ ಮಾಡಿದ ತಂಡವು, ಅವರೊಂದಿಗೆ ವಿಚಾರ ವಿನಿಮಯ ಮಾಡಿತು.
ಸಂವಾದ ಕಾರ್ಯಕ್ರಮದಲ್ಲಿ ಎನ್.ವೈ.ಕೆ ಜಿಲ್ಲಾ ಯುವ ಸಂಯೋಜಕ ರಘುವೀರ್ ಸೂಟರ್ಪೇಟೆ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಷಾ, ಯೆನೆಪೋಯ ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಕಾರ್ಯಕ್ರಮಗಳ ಸಂಯೋಜಕಿ ಡಾ.ಅಶ್ವಿನಿ ಶೆಟ್ಟಿ, ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.