Home Mangalorean News Kannada News ಮಂಗಳೂರು: ಅಕ್ರಮ ಮರಳುಗಾರಿಕೆ ತಡೆಯಲು ತಂಡ ರಚನೆ  

ಮಂಗಳೂರು: ಅಕ್ರಮ ಮರಳುಗಾರಿಕೆ ತಡೆಯಲು ತಂಡ ರಚನೆ  

Spread the love

ಮಂಗಳೂರು: ಅಕ್ರಮ ಮರಳುಗಾರಿಕೆ ತಡೆಯಲು ತಂಡ ರಚನೆ  

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಣ ಕುರಿತು ಜಿಲ್ಲಾ ಮರಳು ಸಮಿತಿ ಸಭೆ ಜೂನ್ 17 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಣ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತೆ ತಂಡಗಳನ್ನು ರಚಿಸಲಾಯಿತು. ಸದರಿ ತಂಡಗಳು ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994ರ ತಿದ್ದುಪಡಿ ನಿಯಮ 2016 ರಂತೆ ಅಧಿಕಾರವನ್ನು ನಿಯೋಜಿಸಲಾಗಿರುತ್ತದೆ. ಸದರಿ ತಂಡವು ಕ್ಷಿಪ್ರವಾಗಿ, ತೀಕ್ಷ್ಮವಾಗಿ 24×7 ಕಾರ್ಯನಿರ್ವಹಿಸಲಿದೆ.
ಜೂನ್ 16 ರಂದು ಮಂಗಳೂರು ತಾಲೂಕಿನ ಅಡ್ಯಾರ್ ಗ್ರಾಮದಲ್ಲಿ ನಡೆಯುತ್ತಿದ್ದ ಅನಧಿಕೃತ ಮರಳುಗಾರಿಕೆಯನ್ನು ತಡೆಗಟ್ಟುವ ಸಲುವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಾಖೆಯ ನಿಗ್ರಹದಳದ ಅಧಿಕಾರಿಗಳನ್ನೊಳಗೊಂಡ ಎರಡು ತಂಡಗಳನ್ನು ರಚಿಸಿಕೊಂಡು ಅನಧಿಕೃತವಾಗಿ ಮರಳುಗಾರಿಕೆ, ಸಾಗಾಣಿಕೆ, ದಾಸ್ತಾನು ಮಾಡುತ್ತಿದ್ದ ಪ್ರದೇಶಗಳನ್ನು ದಾಳಿ ನಡೆಸಿರುವ ಬಗ್ಗೆ ವಿವರ ಈ ಕೆಳಗಿನಂತಿವೆ:-

1) ಮಂಗಳೂರು ತಾಲೂಕು ಅಡ್ಯಾರು ಗ್ರಾಮದ ಅಡ್ಯಾರು ಕಟ್ಟೆ ಬಳಿ ಹರಿಯುತ್ತಿರುವ ನೇತ್ರಾವತಿ ನದಿ ಪಾತ್ರದಲ್ಲಿ ಅನಧಿಕೃತವಾಗಿ ಮರಳುಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಿದ್ದು, ಬೆಳಿಗ್ಗೆ 3 ಗಂಟೆಗೆ ದಾಳಿ ನಡೆಸಲಾಗಿತ್ತು, ಈ ಸಮಯದಲ್ಲಿ ಮರಳು ತೆಗೆಯಲು ಬಳಸಿದ್ದ 1 ಟಾಟಾ ಹಿಟಾಚಿ, 1 ಜೆ.ಸಿ.ಬಿ., 11 ಕಬ್ಬಿಣದ ಪೈಪುಗಳು (20 ಅಡಿ ಉದ್ದ, 6 ಇಂಚು ಅಗಲ), 18 ಡ್ರಮ್‍ಗಳು, 9 ಪ್ಲಾಸ್ಟಿಕ್ ಪೈಪುಗಳು, 3 ಫೈಬರ್ ಬಾಕ್ಸ್‍ಗಳು, ಮರಳು ತುಂಬಿದ 2 ಟಿಪ್ಪರ್ ವಾಹನಗಳು ಹಾಗೂ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 700 ಮೆಟ್ರಿಕ್‍ಟನ್ ಮರಳನ್ನು ಇಲಾಖೆಯ ವಶಕ್ಕೆ ಪಡೆದು ಜಿಲ್ಲಾಡಳಿತದಿಂದ ನಿರ್ಮಿಸಿರುವ ಮಳಲಿ ಸ್ಟಾರ್ಕ್‍ಯಾರ್ಡ್‍ಗೆ ಸ್ಥಳಾಂತರಿಸಲಾಗಿರುತ್ತದೆ.

2) ಮಂಗಳೂರು ತಾಲೂಕು ಮಳವೂರು ಡ್ಯಾಂನ ರೈಲ್ವೆ ಹಳಿ ಸೇತುವೆ ಬಳಿ ಅನಧಿಕೃತವಾಗಿ ಮರಳುಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಿದ್ದು ಬೆಳಿಗ್ಗೆ 3 ಗಂಟೆಗೆ ದಾಳಿ ನಡೆಸಲಾಯಿತು. ಈ ಸಮಯದಲ್ಲಿ ಅನಧಿಕೃತವಾಗಿ ಮರಳು ತೆಗೆಯಲು ಬಳಸಿದ್ದ 1 ಡ್ರೆಜ್ಜಿಂಗ್ ಯಂತ್ರವನ್ನು ವಶಕ್ಕೆ ಪಡೆದು ಕಾವೂರು ಪೊಲೀಸ್ ಠಾಣೆಯ ಸುಪರ್ದಿಗೆ ನೀಡಲಾಗಿರುತ್ತದೆ. ಸದರಿ ಪ್ರದೆಶದಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 50 ಮೆಟ್ರಿಕ್‍ಟನ್ ಮರಳನ್ನು ಇಲಾಖೆಯ ವಶಕ್ಕೆ ಪಡೆದು ಸದರಿ ಪ್ರದೇಶದ ಪಕ್ಕದ ಜಮೀನಿನ ಮಾಲೀಕರಿಗೆ ಮರಳು ಸಾಗಾಣಿಕೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ಮೇಲಿನ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಅನಧಿಕೃತವಾಗಿ ಮರಳು ತೆಗೆದು ಸಾಗಾಣಿಕೆ ಮಾಡುತ್ತಿದ್ದವರ ವಿರುದ್ದ ಪರಿವ್ಯಾಪ್ತಿಯ ನ್ಯಾಯಾಲಯದಲ್ಲಿ ಸಿ.ಆರ್.ಪಿ.ಸಿ. 200 ರ ಅಡಿಯಲ್ಲಿ ದಾವೆ ಹೂಡಲು ಕ್ರಮ ಕೈಗೊಳ್ಳಲಾಗುತ್ತಿದೆ.


Spread the love

Exit mobile version