ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹವನ್ನು ತಡೆದ ಚೈಲ್ಡ್‌ಲೈನ್‌

Spread the love

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹಕ್ಕೆ ಮುಂದಾಗಿದ್ದ ಪೋಷಕರಿಗೆ ಚೈಲ್ಡ್‌ಲೈನ್ ಈ ಹಿಂದೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡಿದ್ದರೂ, ಅದನ್ನು ಮೀರಿ ಇಂದು ಮತ್ತೆ ವಿವಾಹಕ್ಕೆ ಯತ್ನಿಸಿದ ವೇಳೆ ಚೈಲ್ಡ್‌ಲೈನ್ ಮಧ್ಯೆಪ್ರವೇಶಿಸಿ ವಿವಾಹವನ್ನು ತಡೆದ ಪ್ರಸಂಗ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇ 18ರಂದು ಚೈಲ್ಡ್‌ಲೈನ್ ಮಂಗಳೂರು-1098ಗೆ ಬಂದ ದೂರಿನಂತೆ ತಂಡವು, ಶಿಶು ಅಭಿವೃದ್ಧಿ ಯೋಜನಾಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಕಾರಿಗಳು ವಿವಾಹ ನಡೆಯಲಿದ್ದ ಬಾಲಕಿಯ ಮನೆಗೆ ತೆರಳಿ, ಬಾಲಕಿಗೆ ಹದಿನೆಂಟು ವರ್ಷ ಆಗದಿರುವುದರಿಂದ ಮದುವೆ ಯನ್ನು ಮಾಡಬಾರದಾಗಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡಿತ್ತು. ಆದರೆ ಬಾಲಕಿಯ ಹೆತ್ತವರು ಹಾಗೂ ಮದುಮಗನ ಹೆತ್ತವರು ಇದನ್ನು ಕಡೆಗಣಿಸಿ ಇಂದು ಮದುವೆಗೆ ತಯಾರಿ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ, ಚೈಲ್ಡ್‌ಲೈನ್ ಮಂಗಳೂರು ತಂಡ, ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಕಾರಿಗಳು ಹಾಗೂ ಉಳ್ಳಾಲ ಪೋಲಿಸ್ ಠಾಣಾಕಾರಿಗಳು ವಿವಾಹ ನಡೆಯಲಿದ್ದ ಉಳ್ಳಾಲದ ಚೀರುಂಭ ಭಗವತಿ ಕ್ಷೇತ್ರಕ್ಕೆ ತೆರಳಿ ಮದುವೆಯನ್ನು ತಡೆದಿದ್ದಾರೆ.

 ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಗ್ರಾಮದ ನಿವಾಸಿಯಾದ 17 ವರ್ಷದ ಬಾಲಕಿಯ ವಿವಾಹವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಡುಮಾಡು, ನರಿಂಗಾನ ಗ್ರಾಮದ 27 ವರ್ಷ ಪ್ರಾಯದ ಯುವಕನೊಂದಿಗೆ ವಿವಾಹ ನಿಶ್ಚಯವಾಗಿದ್ದು, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ ಕಲ್ಯಾಣ ಮಂಟಪದಲ್ಲಿ ಇಂದು ವಿವಾಹ ನಡೆಯಲಿತ್ತು.

ಬಾಲ್ಯ ವಿವಾಹ ತಡೆ ಕಾರ್ಯಾಚರಣೆಯಲ್ಲಿ ಚೈಲ್ಡ್ ಲೈನ್ ಮಂಗಳೂರು-1098ರ ಕೇಂದ್ರ ಸಂಯೋಜಕರಾದ ಸಂಪತ್ ಕಟ್ಟಿ ನೇತೃತ್ವದಲ್ಲಿ ಚೈಲ್ಡ್‌ಲೈನ್ ಸಿಬ್ಬಂದಿ ಅಸುಂತ ಡಿಸೋಜ, ಬಾಲ್ಯ ವಿವಾಹ ನಿಷೇಧ ಆಂದೋಲನ- ಕರ್ನಾಟಕ ಇದರ ರಾಜ್ಯ ಸಂಯೋಜಕರಾದ ಬಸವರಾಜ್ ಹುಲಗನ್ನವರ್, ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಕಾರಿ ಶ್ಯಾಮಲಾ ಹಾಗೂ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಜೀರ್ ಅಹ್ಮದ್, ಉಳ್ಳಾಲ ಠಾಣಾಕಾರಿ ಭಾರತಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.


Spread the love