Home Mangalorean News Kannada News ಮಂಗಳೂರು: ಎಸ್ ಎಸ್ ಎಲ್ ಸಿ, ಪಿಯುಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಮಂಗಳೂರು: ಎಸ್ ಎಸ್ ಎಲ್ ಸಿ, ಪಿಯುಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

Spread the love

ಮಂಗಳೂರು: ಎಸ್ ಎಸ್ ಎಲ್ ಸಿ, ಪಿಯುಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಮಂಗಳೂರು: 2023-24ರ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ಜಿಲ್ಲೆಯ ಎಸ್ ಎಸ್ ಎಲ್ ಸಿ, ಪಿಯುಸಿ ಯ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.

 

ಎಸ್ ಎಸ್ ಎಲ್ ಸಿ, ಯ ಆಯ್ದ 30 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 43 ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವಿಶಿಷ್ಟ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ಮುಲೈ ಮುಹಿಲನ್ ಎಂ.ಪಿ., ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ., ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (ಪದವಿಪೂರ್ವ) ಸಿ.ಡಿ. ಜಯಣ್ಣ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (ಪ್ರಾಥಮಿಕ ಹಾಗೂ ಪ್ರೌಢ ಶಾಲಾ) ವೆಂಕಟೇಶ್ ಸುಬ್ರಾಯ ಪಟಗಾರ್, ಹಾಗೂ ವಿದ್ಯಾರ್ಥಿಗಳ ಹೆತ್ತವರು, ರಕ್ಷಕರು, ಉಪನ್ಯಾಸಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳ ನಿವಾಸದ ಎದುರಿನಿಂದ ಹಾದುಹೋಗುವಾಗ ಆಗಿನ ಜಿಲ್ಲಾಧಿಕಾರಿಗಳ ನಿವಾಸದ ಕಾಂಪೌಂಡು ಗೋಡೆಯ ಹೊರಗಿರುವ ನಾಮಫಲಕದಿಂದ ಉತ್ತೇಜಿತರಾಗಿ ಆ ನಾಮಫಲಕದಲ್ಲಿ ಮುಂದೊಂದು ದಿನ ತಮ್ಮ ಹೆಸರನ್ನು ಹಾಕಿಸಿಕೊಳ್ಳಬೇಕೆಂಬ ಹಂಬಲವು, ನಂತರ ಗುರಿಯಾಗಿ, ಇಂದು ನಿಮ್ಮ ಮುಂದೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ತಮ್ಮ ಗುರಿಯನ್ನು ಸಾಧಿಸಿದ್ದನ್ನು ಸ್ಮರಿಸಿದರು.

ಪ್ರತಿಯೊಂದು ವಿದ್ಯಾರ್ಥಿಗಳಿಗೂ ಈ ವಿಚಾರ ವಿನಿಮಯದ ಕಾರ್ಯಕ್ರಮವು ಸ್ಮರಣೀಯ ಹಾಗೂ ಉತ್ತೇಜನಕಾರಿಯಾಗಿರಲಿ ಎಂಬ ಕಾರಣಕ್ಕಾಗಿ, ವಿಶೇಷವಾಗಿ ಜಿಲ್ಲಾಧಿಕಾರಿಗಳ ನಿವಾಸದಲ್ಲೇ ಆಯೋಜಿಸಿರುವುದಾಗಿ ತಿಳಿಸಿದರು. ಮುಂದೆಯೂ ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಈ ಕಾರ್ಯಕ್ರಮ ಮಾದರಿಯಾಗಿರಲಿ ಎಂದು ಆಶಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಮಕ್ಕಳಿಗೆ ಒತ್ತಡ ನಿರ್ವಹಣೆಯ ಪ್ರಾಮುಖ್ಯತೆ, ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ಉನ್ನತ ಸ್ಥಾನಕ್ಕೆ ಏರುವುದು ಸುಲಭ ಸಾಧ್ಯವೆಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಮಾತನಾಡಿ ವಿದ್ಯಾರ್ಥಿಗಳು ದೊಡ್ಡ ಗುರಿಯನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಎಷ್ಟೇ ಸಾಧನೆ ಮಾಡಿದರು ತಮ್ಮ ಹೆತ್ತವರನ್ನು ಹಾಗೂ ಪೋಷಕರನ್ನು ಎಂದೂ ಮರೆಯಬಾರದು ಹಾಗೂ ಅವರನ್ನು ಸದಾ ಗೌರವದಿಂದ ಕಾಣಬೇಕು ಅವರ ಅನುಭವದ ಮುಂದೆ ವಿದ್ಯಾರ್ಥಿಗಳ ಅನುಭವವು ತುಂಬಾ ಚಿಕ್ಕದಾಗಿರುತ್ತದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ  ಸಿ.ಬಿ. ರಿಷ್ಯಂತ್, ಮಾತನಾಡಿ ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ, ಕಠಿಣ ಪರಿಶ್ರಮ ಅನಿವಾರ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ‘ಯಶಸ್ಸು ಎನ್ನುವುದು ನಿಂತ ನೀರಲ್ಲ ಸದಾ ಹರಿಯುತ್ತಿರುವ ನದಿಯಂತೆ ಎಂದರು’.

ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಬೆಳ್ತಂಗಡಿಯ ಚಿನ್ಮಯ್ ಜಿ.ಕೆ. 6ನೇ ಬ್ಯಾಂಕ್ ಪಡೆದ ಶ್ರೀ ರಾಮಕೃಷ್ಣ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಮಂಗಳೂರಿನ ತೃಷಾ ಎಸ್. ಹಾಗೂ ವಾಲ್ಮೀಕಿ ಆಶ್ರಮ ಶಾಲೆ, ಮಧ್ಯ ಇಲ್ಲಿನ ವಿದ್ಯಾರ್ಥಿಯಾದ ಸೋಮನಾಥ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿರುವಂತಹ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ಸಮರ್ಪಿಸಿದರು.

ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದ ಎಕ್ಸ್ಲೆಂಟ್ ಪಿ.ಯು. ಕಾಲೇಜ್ ಮೂಡಬಿದ್ರೆಯ ವಿದ್ಯಾರ್ಥಿ ಗುಣಸಾಗರ್ ಡಿ., ರಾಜ್ಯಕ್ಕೆ 5ನೇ ರಾಂಕ್ ಪಡೆದ ಎಕ್ಸ್ಪರ್ಟ್ ಪಿ.ಯು.ಕಾಲೇಜ್, ಕೊಡಿಯಾಲ್ ಬೈಲ್, ಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಶಾಶ್ವತಿ, ರಾಜ್ಯಕ್ಕೆ 10ನೇ ರ್ಯಾಂ ಕ್ ಪಡೆದ ಸರಕಾರಿ ಹೆಣ್ಣುಮಕ್ಕಳ ಪದವಿಪೂರ್ವ ಕಾಲೇಜು, ಬಲ್ಮಠ, ಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಅಭಿಲಾಶ ಧೋಟ, ಮಾತನಾಡಿ ಅಧಿಕಾರಿಗಳು ತಮ್ಮ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳಿಗಾಗಿ ಸಮಯವನ್ನು ಮುಡಿಪಾಗಿಟ್ಟು ಅವರು ಯಶಸ್ಸನ್ನು ಪಡೆಯಲು ಉತ್ತಮ ಸಲಹೆ ಸೂಚನೆಗಳನ್ನು ನೀಡಿರುವುದಕ್ಕಾಗಿ ವಂದಿಸಿದರು.

ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಜಿಲ್ಲಾಧಿಕಾರಿಗಳ ನಿವಾಸವನ್ನು ವೀಕ್ಷಿಸಿ. ಅಧಿಕಾರಿಗಳೊಂದಿಗೆ ಪೋಟೋ ಕ್ಲಿಕ್ಕಿಸಿ ಆನಂದಿಸಿದರು.

ಈ ರೀತಿಯ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ವಿದ್ಯಾರ್ಥಿಗಳ ಹೆತ್ತವರು ಮಾತನಾಡಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಆಗಮಿಸುವ, ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದ ಸಮರ್ಪಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಈಶ್ವರ್ ಎಚ್.ಆರ್. (ಮಂಗಳೂರು-ದಕ್ಷಿಣ) ಕಾರ್ಯಕ್ರಮಕ್ಕೆ ಬಂದಂತಹ ಅಧಿಕಾರಿ ವರ್ಗಕ್ಕೆ ಹಾಗೂ ವಿದ್ಯಾರ್ಥಿ ವೃಂದಕ್ಕೆ ಧನ್ಯವಾದ ಸಮರ್ಪಿಸಿ ವಂದನಾರ್ಪಣೆಗೈದರು. ನಿಸರ್ಗ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಶ್ರೀ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version