ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳವಾದ ವಸ್ತುಗಳನ್ನು ವಾರಿಸುದಾರರಿಗೆ ಹಸ್ತಾಂತರ

Spread the love

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳವಾದ ವಸ್ತುಗಳನ್ನು ವಾರಿಸುದಾರರಿಗೆ ಹಸ್ತಾಂತರ

ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಕಳವಾದ ಪ್ರಕರಣಗಳಲ್ಲಿ ಒಟ್ಟು 3.72 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಕಳವಾದ ಸೊತ್ತುಗಳ ಮರುಕಳಿಸುವ ಕವಾಯತು ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಾರಿಸುದಾರ ರಿಗೆ ಸೊತ್ತುಗಳನ್ನು ಮರಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2018ನೇ ಸಾಲಿನಲ್ಲಿ ಒಟ್ಟು 4.30 ಕೋಟಿ ರೂ. ಮೌಲ್ಯದ ಸೊತ್ತು ಕಳವಾಗಿದ್ದು 3.40ಕೋಟಿ ಮೌಲ್ಯ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ. 2019ನೇ ಸಾಲಿನಲ್ಲಿ ಒಟ್ಟು 65 ಲಕ್ಷ ರೂ. ಮೌಲ್ಯದ ಸೊತ್ತು ಕಳವಾಗಿದ್ದು, 32ಲಕ್ಷ ರೂ. ಮೌಲ್ಯದ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳು, ಕಳವು ಪ್ರಕರಣಗಳನ್ನು ಸಮರ್ಪಕವಾಗಿ ತನಿಖೆ ನಡೆಸಿ, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಎಲ್ಲ ಅಧಿಕಾರಿ, ಸಿಬ್ಬಂದಿಗಳನ್ನು ಅವರು ಈ ಸಂದರ್ಭ ಅಭಿನಂದಿಸಿದರು.

ಮಂಗಳೂರು ಸೆಂಟ್ರಲ್ ಉಪವಿಭಾಗದಿಂದ 39,17,900ರೂ., ಮಂಗಳೂರು ದಕ್ಷಿಣ ಉಪವಿಭಾಗದಿಂದ 36,60,410ರೂ., ಮಂಗಳೂರು ಉತ್ತರ ವಿಭಾಗದಿಂದ 2477180 ರೂ. ಮೌಲ್ಯ ಸೊತ್ತು ವಶಪಡಿಸಿಕೊಳ್ಳಲಾಗಿದ್ದು ಇದರಲ್ಲಿ ನಗದು, ಚಿನ್ನಾಭರಣ, ನಾನಾ ಮಾದರಿ ಬೈಕ್‌ಗಳು, ಮೊಬೈಲ್, ಕ್ಯಾಮೆರಾ ಸೇರಿವೆ. ಈ ಯಶಸ್ಸಿನಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಕೆಲವು ಸಮಯ ಹಿಂದೆ ವರ್ಗಾವಣೆಯಾದ ಅಕಾರಿಗಳ, ಸಿಬ್ಬಂದಿ ಕೊಡುಗೆ ಇದೆ ಎಂದರು.

ಕಳವು ಸೇರಿದಂತೆ ಯಾವುದೇ ಪ್ರಕರಣ ನಡೆದ ಬಳಿಕ ತನಿಖೆ ಮಾಡಿ ವಶಪಡಿಸಿಕೊಂಡ ಸೊತ್ತುಗಳನ್ನು ಕೋರ್ಟ್ ಮುಖೇನ ವಾರಿಸುದಾರರಿಗೆ ಮರಳಿ ಕೊಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸರು ಇಲಾಖೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿ ಕೆಲಸ ಮಾಡುತ್ತಿದ್ದು, ಇದು ಇಲಾಖೆ ಬಗ್ಗೆ ಜನರಲ್ಲಿರುವ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಬಳಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ದೂರು, ಸಲಹೆಗಳಿದ್ದಲ್ಲಿ ಫೇಸ್ ಬುಕ್, ವಾಟ್ಸ್‌ಆಯಪ್, ಟ್ವಿಟರ್ ಮೂಲಕ ನೀಡಿದರೆ ಹೆಚ್ಚು ಅನುಕೂಲ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿ ಮಾಡುವಲ್ಲಿ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.


Spread the love