ಮಂಗಳೂರು: ಕೆ.ಜೆ. ಜಾರ್ಜ್ ಗೃಹಸಚಿವರಾಗಿ ಮುಂದುವರಿಯುವುದು ರಾಜ್ಯದ ಹಿತಕ್ಕೆ ಮಾರಕ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಸುರೇಶ್ ಕುಮಾರ್ ಎಂದು ಆರೋಪಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೃಹಸಚಿವರಾಗಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವುದು ಒತ್ತಟ್ಟಿಗಿರಲಿ, ಕನಿಷ್ಠ ಪಕ್ಷ ಅವರನ್ನು ಶಾಸಕನಾಗಿ ಆರಿಸಿದ ಕ್ಷೇತ್ರದ ಜನತೆಗೂ ನ್ಯಾಯ ಒದಗಿಸಿಲ್ಲ. ಜಾರ್ಜ್ ಹೈಕಮಾಂಡ್ ಕೋಟಾದ ಮೂಲಕ ಸಚಿವರಾದವರು ಎಂದರು.
ಸಿದ್ದರಾಮಯ್ಯ ನೇತೃತ್ದದ ಸರಕಾರ ಲವಲವಿಕೆ ಕಳೆದುಕೊಂಡಿದ್ದು, ಹೇಗೋ 2 ವರ್ಷ ಕಳೆಯಿತು, ಇನ್ನೂ 3 ವರ್ಷ ಕಳೆದರೆ ಸಾಕು ಎಂಬ ಮನಃಸ್ಥಿತಿಧಿಧಿಯಲ್ಲಿದೆ. ಈ ಸರಕಾರದ 2 ವರ್ಷಗಳ ಕಾರ್ಯವೈಖರಿ ಗಮನಿಸಿ ಜನ ಬೇಸತ್ತಿದ್ದಾರೆ ಎಂದರು.
ಸರಕಾರ ಬೆಂಗಳೂರಿನಲ್ಲಿ ಬಡವರು ನಿರ್ಮಿಸಿದ ಮನೆಗಳನ್ನು ಒಡೆಯುವ ಕಾರ್ಯ ಮಾಡುತ್ತಿದೆ. ಜನಹಿತ ಕಾರ್ಯ ಮಾಡುವ ಬದಲು ಮನೆ ಒಡೆಯುವ ಕೆಲಸ ಮಾಡುತ್ತಿದ್ದು, ಹೃದಯಹೀನ ಸರಕಾರವಾಗಿದೆ ಎಂದರು.
ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸುವ ರಿಯಾಯಿತಿ ದರದ ತಾಳೆ ಎಣ್ಣೆ (ಪಾಮ್ ಆಯಿಲ್) ಹಾಗೂ ಉಪ್ಪಿನ ಪ್ಯಾಕೆಟ್‌ಗಳಲ್ಲಿ ಸಿಎಂ ಹಾಗೂ ಆಹಾರ ಖಾತೆ ಸಚಿವರ ಭಾವಚಿತ್ರ ಪ್ರಕಟಿಸಿ ಹಂಚುತ್ತಿರುವುದರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ಶುಕ್ರವಾರ ದೂರು ಸಲ್ಲಿಸಿದೆ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸರಕಾರಕ್ಕೆ ನೋಟಿಸ್ ಜಾರಿ ಆಗುವ ಸಾಧ್ಯತೆಗಳಿವೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ, ಕೋಶಾಧಿಕಾರಿ ಗೋಪಿನಾಥ ರೆಡ್ಡಿ, ಜಿಲ್ಲಾ ಬಿಜಿಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಮುಖಂಡರಾದ ಸಂಜೀವ ಮಠಂದೂರು, ದಿವಾಕರ ಸಾಮಾನಿ, ವಿಕಾಸ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.