ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ ಗುಜ್ಜರಕೆರೆಯಲ್ಲಿ ಪುನರಾರಂಭಿಸಿದ ಅಭಿವೃದ್ಧಿ ಕಾಮಗಾರಿಯನ್ನು ಅದಿತ್ಯವಾರ ಅಧಿಕಾರಿಗಳ ಜೊತೆಗೆ ಪರಿಶೀಲಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ಈಗಾಗಲೇ ಸಣ್ಣ ನೀರಾವರಿ ಇಲಾಖೆಯ ಮೂಲಕ 1 ಕೋಟಿ ರೂ ಅನುದಾನವು ಬಿಡುಗಡೆಗೊಂಡಿದ್ದು, ಕೆರೆಯ ಪುನರಾಭಿವೃದ್ದಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.
ಕಾಮಗಾರಿಯನ್ನು ಪ್ರಾರಂಬಿಸುವ ಮೊದಲು ಹೂಳೆತ್ತುವುದು ಸುಲಭ ಎಂದು ಅಂದುಕೊಂಡಿದ್ದೆವು, ಆದರೆ ಈಗ ಇದರ ನಿಜವಾದ ಸಮಸ್ಯೆ ಅರಿವಾಗುತ್ತಿದೆ. ಮುಖ್ಯವಾಗಿ ಇದರಲ್ಲಿ ಇರುವ ಹೂಳಿನ ಪ್ರಮಾಣ ಹೆಚ್ಚಾಗಿದ್ದು ಇನ್ನೂ ಖಚಿತವಾಗಿಲ್ಲ. ಸುಮಾರು ಮೂರು ವಾರಗಳಲ್ಲಿ ಅಧಿಕ ಪ್ರಮಾಣದ ಹೂಳನ್ನು ಮೇಲಕ್ಕೆತ್ತಲಾಗಿದೆ. ಆದರೆ ಅಕಾಲಿಕ ಮಳೆಯಿಂದ ನೀರಿನ ಪ್ರಮಾಣ ಜಾಸ್ತಿಯಾಗಿ ಕಾಮಗಾರಿಗೆ ಅಡಚಣೆಯಾಗಿದೆ. ಕೆರೆಯ ಆಳ 20 ರಿಂದ 30 ಅಡಿಯಷ್ಟು ಇದ್ದು, ನೀರನ್ನು ಖಾಲಿಮಾಡದೆ ಇನ್ನುಳಿದ ಹೂಳನ್ನು ತೆಗೆಯುವು ಕಷ್ಟ, ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿದರು.
ಸಮಸ್ಯೆಯ ತೀವ್ರತೆಯನ್ನು ಅರಿತು ಸಣ್ಣ ನೀರಾವರಿ ಅಧಿಕಾರಿಗಳೊಂದಿಗೆ ಶಾಸಕರು ಈಗಾಗಲೇ ಮಾತನಾಡಿ ಡ್ರಜ್ಜಿಂಗ್ ಮೆಷಿನ್ ಅಳವಡಿಸಲು ಸೂಚಿಸಿದ್ದರು. ಇನ್ನು ಎರಡು ದಿನಗಳಲ್ಲಿ ಈ ಯಂತ್ರವನ್ನು ತರಿಸಿ ಮತ್ತು ನೀರನ್ನು ಖಾಲಿಮಾಡಿ ಹೂಳನ್ನು ತೆಗೆಯುವ ಕಾರ್ಯವನ್ನು ಪ್ರಾರಂಭಿಸಲಾಗುವುದು. ಎಂದು ಹೇಳಿದರು.
ಈ ಎಲ್ಲಾ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಇದೇ ಸಂಧರ್ಭದಲ್ಲಿ ಚರಂಡಿಯ ನೀರು ಈ ಕೆರೆಗೆ ಸೇರುತ್ತಿರುವ ಬಗ್ಗೆ ಸ್ಥಳೀಯರು ಶಾಸಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಥಮ ಹಂತದ ಕಾಮಗಾರಿ ಮುಗಿದ ತಕ್ಷಣ ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ರತಿಕಲಾ, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶಂಬೂರಾವ್, ಟಿ.ಕೆ ಸುಧೀರ್, ರಮಾನಂದ್ ಪೂಜಾರಿ ಉಪಸ್ಥಿತರಿದ್ದರು.